ವಿವಿಧೆಡೆ ಪೊಲೀಸ್ ಕಾರ್ಯಾಚರಣೆ: ಎಂ.ಡಿ.ಎಂ.ಎ, ಗಾಂಜಾ ಸಹಿತ ಮೂವರ ಸೆರೆ
ಮಂಜೇಶ್ವರ/ಬದಿಯಡ್ಕ: ಮಂಜೇಶ್ವರ ಹಾಗೂ ಬದಿಯಡ್ಕ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಮಾದಕವಸ್ತುವಾದ ಎಂಡಿಎಂಎ ಹಾಗೂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಮಂಜೇಶ್ವರ ಪೊಲೀಸರು ನಿನ್ನೆ ರಾತ್ರಿ 11 ಗಂಟೆ ವೇಳೆ ಮೊರತ್ತಣೆಯಲ್ಲಿ ಕಾರ್ಯಾ ಚರಣೆ ನಡೆಸುತ್ತಿದ್ದಾಗ ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ 97 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಈ ಸಂಬಂಧ ಹೊಸಂಗಡಿ ಆಚಾರಿಮೂಲೆ ಬಿಸ್ಮಿಲ್ಲಾ ಮಂಜಿಲ್ನ ಮೊಹಮ್ಮದ್ ಅಲ್ತಾಫ್ (34) ಎಂಬಾತನನ್ನು ಬಂಧಿಸಲಾಗಿದೆ. ಹೊಸಂಗಡಿಯಿಂದ ಮೊರತ್ತಣೆಗೆ ತೆರಳುತ್ತಿದ್ದ ಸ್ಕೂಟರ್ನ ಮೇಲೆ ಸಂಶಯಗೊಂಡ ಪೊಲೀಸರು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಎಂಡಿಎಂಎ ಪತ್ತೆಯಾಗಿದೆ. ಮಾರಾಟಕ್ಕಾಗಿ ಇದನ್ನು ಕೊಂಡೊ ಯ್ಯುತ್ತಿದ್ದುದಾಗಿ ತಿಳಿದುಬಂದಿದೆ.
ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಎಸ್ಐಗಳಾದ ವಿಶಾಖ್, ನಿಖಿಲ್, ಪೊಲೀಸ್ ನಿತಿನ್, ಚಾಲಕ ಪ್ರಶೋಭ್ ಎಂಬಿವರಿದ್ದರು.
ಬದಿಯಡ್ಕ ಪೊಲೀಸರು ಬೇಳ ಪೆರಿಯಡ್ಕದ ಮನೆಯೊಂದಕ್ಕೆ ದಾಳಿ ನಡೆಸಿ 1.92 ಗ್ರಾಂ ಎಂಡಿಎಂಎ, 41.30 ಗ್ರಾಂ ಗಾಂಜಾ ಹಾಗೂ 13,500 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೆರಿಯಡ್ಕ ಕುಂಜಾರು ನಿವಾಸಿ ಇಬ್ರಾಹಿಂ ಇಸ್ಫಾಕ್ ಕೆ.ಎ (25), ಬೇಳ ಮೆಣಸಿನಪಾರೆ ನಿವಾಸಿ ಮೊಹಮ್ಮದ್ ರಫೀಕ್ (21) ಎಂಬಿವರನ್ನು ಬದಿಯಡ್ಕ ಎಸ್ಐ ಕೆ.ಆರ್. ಉಮೇಶ್ ಹಾಗೂ ತಂಡ ಸೆರೆಹಿಡಿದಿದೆ. ಎಸ್ಐ ಹಾಗೂ ತಂಡ ರಾತ್ರಿ ಹೊತ್ತಿನಲ್ಲಿ ಪಟ್ರೋಲಿಂಗ್ ನಡೆಸುತ್ತಿದ್ದಾಗ ಪೆರಿಯಡ್ಕದ ಮನೆಯನ್ನು ಕೇಂದ್ರೀಕರಿಸಿ ಮಾದಕವಸ್ತು ಮಾರಾಟ ನಡೆಯುತ್ತಿದೆಯೆಂಬ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ರ ನಿರ್ದೇಶ ಪ್ರಕಾರ ಮನೆಯೊಳಗೆ ತಪಾಸಣೆ ನಡೆಸಿದಾಗ ಮಾದಕವಸ್ತುಗಳು ಹಾಗೂ ಹಣ ಪತ್ತೆಯಾಗಿದೆ. ಬೆಡ್ರೂಂನ ಬೆಡ್ನ ಅಡಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಬಚ್ಚಿಟ್ಟ ಸ್ಥಿತಿಯಲ್ಲಿ ಎಂಡಿಎಂಎ ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಅಡುಗೆ ಕೋಣೆ ಸಹಿತ ವಿವಿಧೆಡೆ ಶೋಧ ನಡೆಸಲಾಯಿತು. ಈ ವೇಳೆ ಉಪಯೋಗಿಸದ ಫ್ರಿಡ್ಜ್ನ ಮೇಲೆ ಸಂಶಯಗೊಂಡು ಅದನ್ನು ತೆರೆದು ನೋಡಿದಾಗ ಅದರೊಳಗೆ ಹಾಗೂ ಅಡಿಭಾಗದಲ್ಲಾಗಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಬಚ್ಚಿಟ್ಟಿದ್ದ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.