ವೈಭವದ ಕೌಂಡಿಕ್ಕಾನ ಯಾತ್ರೆ ಸಮಾಪ್ತಿ ಭಕ್ತರಿಗೆ ಮೂಲಮೃತ್ತಿಕಾ ಪ್ರಸಾದ ವಿತರಣೆ
ಅಡೂರು: ಇಲ್ಲಿನ ಮಹತೋ ಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಸ್ಥಾನ ದಲ್ಲಿ ಕೌಂಡಿಕ್ಕಾನ ಯಾತ್ರಾ ಮಹೋತ್ಸವ ನಿನ್ನೆ ಜರಗಿತು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮೂಲಸ್ಥಾನದಿಂದ ಮೃತ್ತಿಕೆಯನ್ನು ತಂದು ಬಿಂಬ ಚೈತನ್ಯವೃದ್ಧಿಗೊಳಿಸಿದರು. ನಿನ್ನೆ ಮುಂಜಾನೆ ೩ ಗಂಟೆಗೆ ದೇವಸ್ಥಾನ ದಲ್ಲಿ ಪ್ರಾರ್ಥನೆ ನಡೆಸಿ ಕೌಂಡಿಕ್ಕಾನ ಯಾತ್ರೆ ಆರಂಭಿಸಲಾಗಿದೆ. ವ್ರತಧಾರಿಗಳಾದ ೧೫೦೦ ಮಂದಿ ಭಕ್ತರು ಜೊತೆ ಸೇರಿದರು. ಸುಮಾರು ೫ ಕಿಲೋ ಮೀಟರ್ ದೂರದ ಕೌಂಡಿಕ್ಕಾನದಲ್ಲಿ 8.15ರ ಹೊತ್ತಿಗೆ ಸೀಯಾಳಾಭಿಷೇಕ, ತಂಬಿಲ ಜರಗಿತು. ಅಲ್ಲಿಂದ ಮೂಲಸ್ಥಾನಕ್ಕೆ ಎಡವಳ ಬೆಳ್ಳಿಯಪ್ಪ ಕರಿಕೆ ದಾರಿ ತೋರಿಸಿದರು. ನಂತರ ಬ್ರಹ್ಮಶ್ರೀ ವಾಸುದೇವ ಕುಂಟಾರು, ರವೀಶ ತಂತ್ರಿ ಸಾಗಿದರು. 10.30ಕ್ಕೆ ಮೂಲಸ್ಥಾನದಿಂದ ಮೃತ್ತಿಕೆ ಸಂಗ್ರಹಿಸಿ ವಾಸುದೇವ ತಂತ್ರಿ ಕೌಂಡಿಕ್ಕಾನಕ್ಕೆ ಹಿಂತಿರುಗಿದರು. ಮಧ್ಯಾಹ್ನ 12 ಗಂಟೆ ವೇಳೆಗೆ ಕ್ಷೇತ್ರಕ್ಕೆ ತಲುಪಿದ್ದು ಕ್ಷೇತ್ರದಲ್ಲಿ ಬಿಂಬಚೈತನ್ಯ ವೃದ್ಧಿ, ಧನುಪೂಜೆ, ಸಹಸ್ರ ಕುಂಭಾಭಿಷೇಕ, ಪಲ್ಲಪೂಜೆ ನಡೆಸಲಾಯಿತು. ಬಳಿಕ ಮೂಲಮೃತ್ತಿಕಾ ಪ್ರಸಾದ ವಿತರಣೆ ನಡೆಯಿತು. ಧಾರ್ಮಿಕ ಸಭೆಯಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿಯ ವರಿಗೆ ಗೌರವಾರ್ಪಣೆ ಜರಗಿತು. ರಾತ್ರಿ ಉತ್ಸವಬಲಿ ನಡೆಯಿತು.
12 ವರ್ಷಕ್ಕೊಮ್ಮೆ ಜರಗುವ ಈ ಪುಣ್ಯ ಕಾರ್ಯಕ್ಕೆ ಅಡೂರು ಪರಿಸರ ಸಂಪೂರ್ಣ ತೊಡಗಿಸಿಕೊಂಡಿದ್ದು, 34 ಪ್ರಾದೇಶಿಕ ಸಮಿತಿಗಳ ಸ್ವಯಂ ಸೇವಕರ ತಂಡ ಅಹರ್ನಿಶಿ ದುಡಿದಿದ್ದಾರೆ. ಭಜನೆ ಸಂಕೀರ್ತನೆ, ಶಿವನಾಮಸ್ಮರಣೆ, ಗೀತಾಪಾರಾಯಣ ಜರಗಿ ಅಡೂರಿನಲ್ಲಿ ಭಕ್ತಿಸಾಂದ್ರ ವಾತಾವರಣ ಸೃಷ್ಟಿಯಾಗಿತ್ತು.