ಸಾರ್ವಜನಿಕರ ಬೇಡಿಕೆ ಈಡೇರಿಕೆಯತ್ತ ಕುಂಬಳೆಯಲ್ಲಿ ಶೌಚಾಲಯ ನಿರ್ಮಾಣ ಆರಂಭ
ಕುಂಬಳೆ: ಕುಂಬಳೆ ಪೇಟೆಯಲ್ಲಿ ಸುಸಜ್ಜಿತ ಶೌಚಾಲಯ ಬೇಕೆಂಬ ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗೆ ಇದೀಗ ಪರಿಹಾರ ಉಂಟಾಗಿದೆ.
ಕುಂಬಳೆ ಪೇಟೆಯ ಬದಿಯಡ್ಕ ರಸ್ತೆ ಸಮೀಪ ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಪಂಚಾಯತ್‌ನ ಫಂಡ್‌ನಿಂದ ೪೫ ಲಕ್ಷ ರೂಪಾಯಿ ಇದಕ್ಕಾಗಿ ಖರ್ಚು ಮಾಡಲಾಗುವುದು. ಈ ಕಟ್ಟಡದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ, ಕಾಫಿಶಾಪ್ ಮೊದಲಾದವುಗಳಿರು ವುದು. ಕುಂಬಳೆ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದಿ ರುವುದು ಇಲ್ಲಿಗೆ ತಲುಪುವ ಮಂದಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಶೌಚಾಲಯ ನಿರ್ಮಿಸಬೇಕೆಂಬ ಬೇಡಿಕೆ ಹಲವು ಕಾಲದಿಂದ ಕೇಳಿ ಬಂದಿದೆ.
ಇದೇ ವೇಳೆ ಕುಂಬಳೆ ಪೇಟೆಯಲ್ಲಿ ಬಸ್ ನಿಲ್ದಾಣ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ. ಇದರ ನಿರ್ಮಾಣ ಹೊಣೆಗಾರಿಕೆಯನ್ನು ಯುಎಲ್‌ಸಿಸಿ ಸೊಸೈಟಿಗೆ ನೀಡಲು ಪಂಚಾಯತ್ ನಿರ್ಧರಿಸಿದೆ. ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆಯೆಂದು ಹೇಳಲಾಗುತ್ತಿದೆ. ಈ ಬಸ್ ನಿಲ್ದಾಣ ಕಟ್ಟಡದಲ್ಲಿ ಆಧುನಿಕ ರೀತಿಯ ಶೌಚಾಲಯ ನಿರ್ಮಿಸಲಾಗುವುದು. ಈ ಹಿಂದೆ ಇಲ್ಲಿದ್ದ ಬಸ್ ನಿಲ್ದಾಣ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡವನ್ನು ವರ್ಷಗಳ ಹಿಂದೆ ಮುರಿದು ತೆಗೆಯಲಾಗಿತ್ತು.