ಸೋಂಕಾಲಿನಲ್ಲಿ ಮತ್ತೆ ಕುಡಿಯುವ ನೀರು ಪೋಲು: ದುರಸ್ತಿಗೆ ಒತ್ತಾಯ
ಉಪ್ಪಳ: ಪ್ರತಾಪನಗರದಲ್ಲಿ ಪೈಪ್ ಬಿರುಕುಬಿಟ್ಟು ವ್ಯಾಪಕ ಕುಡಿಯುವ ನೀರು ಪೋಲಾಗುತ್ತಿದ್ದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಸೋಂಕಾಲಿನಲ್ಲಿ ಹಲವಾರು ದಿನಗಳಿಂದ ಪೈಪ್ ಬಿರುಕುಬಿಟ್ಟಿದ್ದು, ಇದರಿಂದ ನೀರು ಪೋಲಾಗಿ ರಸ್ತೆ ಉದ್ದಕ್ಕೂ ಹರಿದು ಮಣ್ಣಿನ ರಸ್ತೆ ಕೆಸರುಗದ್ದೆಯಾಗಿ ವಾಹನ ಸಂಚಾರ ಸಹಿತ ನಡೆದಾಡಲು ಸಮಸ್ಯೆಯಾಗಿರುವುದಾಗಿ ದೂರಲಾಗಿದೆ. ಕುಡಿಯಲು ನೀರಿಲ್ಲದಿರುವಾಗ ಇದ್ದ ನೀರು ಈ ರೀತಿ ಪೋಲಾದರೆ ಮುಂದೆ ನೀರಿಗೆ ತತ್ವಾರ ಉಂಟಾಗಬಹದೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದು ಸ್ಥಳೀಯರಲ್ಲಿ ರೋಷಕ್ಕೆ ಕಾರಣವಾಗಿದೆ. ಡಿಸೆಂಬರ್‌ನಲ್ಲಿ ಇದೇ ಪರಿಸರದ ಬಸ್ ನಿಲ್ದಾಣ ಬಳಿಯಲ್ಲಿ ವ್ಯಾಪಕ ನೀರು ಪೋಲಾಗುತ್ತಿದ್ದು, ಊರವರ ನಿರಂತರ ಒತ್ತಾಯದಿಂದ ದುರಸ್ತಿಗೊಳಿಸಲಾಗಿದೆ. ಈಗ ಇನ್ನೊಂದು ಕಡೆ ನೀರು ಪೋಲಾಗುತ್ತಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ ಇಲ್ಲಿ ಬಿರುಕುಬಿಟ್ಟು ನೀರು ಪೋಲಾಗುತ್ತಿರುವ ಬಗ್ಗೆ ತಪಾಸಣೆ ನಡೆಸಿ ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.