ಸ್ಕೂಟರ್ ವಶಕ್ಕೆ ತೆಗೆದ ಎಸ್.ಐ. ನೇತೃತ್ವದ ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಇಬ್ಬರ ಬಂಧನ
ಕಾಸರಗೋಡು: ಕೆರೆಸಿದ ನಂಬ್ರ ಪ್ಲೇಟ್ ಬದಲಾಯಿಸಿ ಅಳವಡಿಸಿದ ಸ್ಕೂಟರನ್ನು ವಶಕ್ಕೆ ತೆಗೆದುಕೊಂಡ ಎಸ್‌ಐ ನೇತೃತ್ವದ ಪೊಲೀಸ್ ತಂಡದ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣದ ಇಬ್ಬರನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಕಳನಾಡು ಕೂವತ್ತೊಟ್ಟಿ ಹೌಸಿನ ಜಾಶೀರ್ (27) ಮತ್ತು ಚೆಂಗಳ ನಾಲ್ಕನೇ ಮೈಲು, ತೈವಳಪ್ಪಿನ ತೈವಳಪ್ಪು ಹೌಸಿನ ಜಿ.ಎ. ಆಸಿಫ್ (32) ಬಂಧಿತ ಆರೋಪಿಗಳು. ಈ ಪ್ರಕರಣದ ಇನ್ನೋರ್ವ ಆರೋಪಿ ಕಲಂದರ್ ಅಲಿ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಲ್ಪರಂಬ ಪೊಲೀಸ್ ಠಾಣೆಯ ಎಸ್‌ಐ ಎ.ಎನ್. ಸುರೇಶ್ ಕುಮಾರ್‌ರ ನೇತೃತ್ವದಲ್ಲಿ ಪೊಲೀಸರಾದ ನಿಶಾಂತ್ ಮತ್ತು ಲಿಜೀಶ್ ಎಂಬವರು ರಾಜ್ಯ ಹೆದ್ದಾರಿಯ ಮೇಲ್ಪರಂಬ ಕೂವತ್ತೊಟ್ಟಿಯಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ, ಆ ದಾರಿಯಾಗಿ ಬಂದ ಸ್ಕೂಟರ್‌ನ ಹಿಂದುಗಡೆ ನಂಬ್ರ ಪ್ಲೇಟಿನ ನಂಬ್ರದಲ್ಲಿ ಒಂದು ನಂಬ್ರವನ್ನು ಅರ್ಧದಷ್ಟು ಕೆರೆಸಿ ಹಾಕಲಾದ ಸ್ಥಿತಿಯಲ್ಲಿ ಗೋಚರಿಸಿತ್ತು. ಮಾತ್ರವಲ್ಲ ಆ ಸ್ಕೂಟರಿನ ವಿಮೆ ಸರ್ಟಿಫಿಕೆಟ್ ಹಾಗೂ ಹೊಗೆ ತಪಾಸಣಾ ಸರ್ಟಿಫಿಕೆಟನ್ನು ನವೀಕರಿಸದೆ ಇರುವುದೂ ಪೊಲೀಸ್ ಪರಿಶೀಲನೆಯಲ್ಲಿ ಪತ್ತೆಯಾಗಿತ್ತು. ಅದಕ್ಕೆ ಸಂಬಂಧಿಸಿ ಪೊಲೀಸರು ಆ ಸ್ಕೂಟರನ್ನು ತಮ್ಮ ವಶಕ್ಕೆ ತೆಗೆಯಲೆತ್ನಿಸಿದ ವೇಳೆ ಮೂವರು ಆರೋಪಿಗಳು ಸೇರಿ ಪೊಲೀಸರನ್ನು ಬೆದರಿಸಿ ಅವರ ಮೇಲೆ ಕೈ ಮಾಡಲೆತ್ನಿಸಿದರೆಂದು ದೂರಲಾಗಿದೆ. ಬಳಿಕ ಅಲ್ಲಿಗೆ ಹೆಚ್ಚುವರಿ ಪೊಲೀಸರು ಆಗಮಿಸಿದ ನಂತರ ಆ ಸ್ಕೂಟರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡರು. ಮಾತ್ರವಲ್ಲ ಆ ಬಗ್ಗೆ ಮೇಲ್ಪರಂಬ ಪೊಲೀಸರು ನಂತರ ಪ್ರಕರಣ ದಾಖಲಿ ಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿ ಈ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.