ಹಳೆಯ ಘಟನೆಯನ್ನು ನಕಲಿಯಾಗಿ ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ ಪ್ರಚಾರಗೈದು ಗಲಭೆಗೆ ಯತ್ನ: ೫ ಮಂದಿ ವಿರುದ್ಧ ಕೇಸು
ಕುಂಬಳೆ: ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯನ್ನು ನಿನ್ನೆ ನಡೆದುದಾಗಿ ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ ಪ್ರಚಾರಗೈದು ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಂತೆ ಐದು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನೌಶಾದ್, ಸಲಾಂ, ಖಾದರ್, ಹಬೀಬ್, ಮುಸ್ತಫ ಎಂಬೀ ಐದು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
೨೦೨೦ರಲ್ಲಿ ಬಂಬ್ರಾಣದಲ್ಲಿ ಘಟನೆಯೊಂದು ನಡೆದಿತ್ತು. ಆ ಘಟನೆ ಯ ವರದಿ ಅಂದು ಕೆಲವು ಆನ್‌ಲೈನ್ ಮಾಧ್ಯಮಗಳಲ್ಲಿ ಪ್ರಚಾರಗೈಯ್ಯಲಾಗಿತ್ತು. ಇದೀಗ ಆ ಘಟನೆಯ ದೃಶ್ಯಗಳನ್ನು ತಿದ್ದುಪಡಿ ಮಾಡಿ ನಿನ್ನೆ ನಡೆದುದಾಗಿ ಚಿತ್ರೀಕರಿಸಿ ತಂಡ ಸಾಮಾಜಿಕ ತಾಣಗಳಲ್ಲಿ ಪ್ರಚಾರ ನಡೆಸಿದೆ. ಕುಂಬಳೆಯ ಕೆಲವು ವಾಟ್ಸಪ್ ಗ್ರೂಪ್‌ಗಳಲ್ಲಿ ನಕಲಿ ಘಟನೆ ಪ್ರಚಾರವೂ ನಡೆದಿದ್ದು ಇದು ಪೊಲೀಸರ ಗಮನಕ್ಕೂ ಬಂದಿದೆ. ಕೂಡಲೇ ಎಸ್‌ಐ ಟಿ.ಎಂ. ವಿಪಿನ್ ಹಾಗೂ ಇನ್‌ಸ್ಪೆಕ್ಟರ್ ಬಿಜೋಯ್ ಎಂ.ಎನ್ ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ನಡೆದ ಘಟನೆಯನ್ನು ಸಾಮಾಜಿಕ ತಾಣಗಳಲ್ಲಿ ಪ್ರಚಾರ ನಡೆಸಿರುವುದು ಐದು ಮಂದಿಯಾಗಿದ್ದಾರೆಂದು ತಿಳಿದು ಬಂದಿದೆ. ಇದರಂತೆ ಈ ಐದು ಮಂದಿ ವಿರುದ್ಧ ಕೇಸು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಮಾತ್ರವಲ್ಲ ಈ ಘಟನೆಯನ್ನು ಪ್ರಚಾರಗೈದ ವಾಟ್ಸಪ್ ಗ್ರೂಪ್‌ಗಳ ಅಡ್ಮಿನ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದೆಂದು ತಿಳಿದುಬಂದಿದೆ.
ಇದೇ ವೇಳೆ ನಕಲಿ ಘಟನೆ ಯಲ್ಲಿ ತಿದ್ದುಪಡಿ ನಡೆಸಿರುವುದು ಗಲ್ಫ್ ನಲ್ಲಾಗಿದೆಯೆಂದೂ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಇದರಿಂದ ಆ ವ್ಯಕ್ತಿಗಳ ಪತ್ತೆಗಾಗಿ ಕ್ರಮಗಳನ್ನು ಆgಂಭಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.