ಹಿರಿಯ ಸಾಹಿತಿ ಅಮೃತ ಸೋಮೇಶ್ವರ ಇನ್ನಿಲ್ಲ

ತಲಪ್ಪಾಡಿ: ತುಳು-ಕನ್ನಡದ ಖ್ಯಾತ ಸಾಹಿತಿ,  ಜಾನಪದ ವಿದ್ವಾಂಸ, ಸಂಶೋಧಕ ಮಂಗಳೂರು ಸಮೀಪದ ಕೋಟೆಕಾರು ಅಡ್ಕದಲ್ಲಿರುವ ಅಮೃತ ಸೋಮೇಶ್ವರ (೮೯) ನಿಧನಹೊಂದಿದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ.  ಮೃತರು ಪತ್ನಿ ನರ್ಮದಾ, ಮಕ್ಕಳಾದ ಚೇತನ್, ಜೀವನ್, ಸೊಸೆಯಂದಿರಾದ ರಾಜೇಶ್ವರಿ, ಸತ್ಯ ಹಾಗೂ ಮೊಮ್ಮಕ್ಕಳ ಸಹಿತ  ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ, ಆನಂದಾಶ್ರಮದಲ್ಲಿ ಪ್ರೌಢಶಾಲೆ ಶಿಕ್ಷಣ ಪೂರೈಸಿ, ಮಂಗಳೂರು ಅಲೋಶಿಯಸ್ ಕಾಲೇಜಿನಲ್ಲಿ  ಪದವಿ ಶಿಕ್ಷಣ ನಡೆಸಿದರು. ಖಾಸಗಿಯಾಗಿ ಓದಿ ಕರ್ನಾಟಕ ವಿ.ವಿಯಿಂದ ಎಂ.ಎ. ಪದವಿ ಗಳಿಸಿದರು. ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಬಳಿಕ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ, ಬಳಿಕ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲೂ ಕನ್ನಡ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದು, ೧೯೯೩ರಲ್ಲಿ ನಿವೃತ್ತರಾದರು. ಆ ಬಳಿಕ ಮಂಗಳೂರು ವಿವಿಯ ಕನ್ನಡ ಅಧ್ಯಯನ ವಿಭಾಗದಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಸೇವೆಗೈದಿದ್ದಾರೆ.

ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಅಮೃತ ಸೋಮೇಶ್ವರ ತುಳು ನಾಡಿನ ಸಂಸ್ಕೃತಿ ಮತ್ತು ಕಲೆಯ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಇವರ ಮೊದಲ ಕೃತಿ ‘ಎಲೆಗಿಳಿ’ ಸಣ್ಣ ಕಥೆಗಳ ಸಂಕಲನ ೧೯೫೭ರಲ್ಲಿ ಪ್ರಕಟವಾಗಿತ್ತು. ತುಳು ಪಾಡ್ದನ ಕಥೆಗಳು, ಯಕ್ಷಗಾನ ಹೆಜ್ಜೆ ಗುರುತು, ಮೋಯ-ಮಲೆಯಾಳ ನಿಘಂಟು ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ತುಳುವಿನಲ್ಲಿ ತಂಬಿಲ, ರಂಗಿತ ಕವನಸಂಕಲನ, ಗೋಂದೋಲ್, ರಾಯರಾವುತೆ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ.   ಅಮರಶಿಲ್ಪಿ ವೀರಕಲ್ಕುಡ, ಘೋರ ಮಾರಕ, ಸಹಸ್ರ ಕವಚಮೋಕ್ಷ, ಕಾಯಕಲ್ಪ, ಅಮರವಾಹಿನಿ ಮೊದಲಾದ ೩೦ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು, ಯಕ್ಷಗಾನ ಕೃತಿ ಸಂಪುಟ ಇವರ ಜಾನಪದ ಯಕ್ಷಗಾನ ಸಂಶೋಧನೆಯ ಫಲವಾಗಿ ಮೂಡಿ ಬಂದ  ಮೌಲಿಕ ಕೃತಿ.

ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಹಲವಾರು ಕಡೆಗಳಿಂದ ಪ್ರಶಸ್ತಿ, ಸನ್ಮಾನಗಳು ಲಭಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ, ಯಕ್ಷಗಾನ ಪ್ರಶಸ್ತಿ ಸಹಿತ ಹಲವು  ಪ್ರಶಸ್ತಿಗಳು ಇವರ ಮುಡಿಗೇರಿದೆ.

Leave a Reply

Your email address will not be published. Required fields are marked *

You cannot copy content of this page