450 ಗ್ರಾಂ ಹ್ಯಾಶಿಶ್ ವಶ: ಕಾರು ಸಹಿತ ಓರ್ವ ಸೆರೆ
ಮಂಜೇಶ್ವರ: ಕೋಡಿಬೈಲು ಗ್ರಾಮದ ಮಣ್ಣಂಗುಳಿ ತೆಕ್ಕೇಕುನ್ ಎಂಬಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತುವಾದ 130 ಗ್ರಾಂ ಹ್ಯಾಶಿಶ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆಸಂಬಂಧಿಸಿ ಬಂಟ್ವಾಳ ತಾಲೂಕಿನ ಮಡುಕುಂಜೆ ನಿವಾಸಿ ಕಲಂದರ್ ಶಾಫಿ (30) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈತ ಈಗ ಮಣ್ಣಂಗುಳಿ ತೆಕ್ಕೇಕುನ್ನಿನಲ್ಲಿ ವಾಸಿಸುತ್ತಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾಲು ಸಾಗಿಸಲು ಬಳಸಲಾದ ಮಾರುತಿ ಸ್ವಿಫ್ಟ್ಟ್ ಕಾರು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ. ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಕೆ.ವಿ. ಮುರಳಿ, ಪ್ರಿವೆಂಟಿವ್ ಆಫೀಸರ್ (ಗ್ರೇಡ್)ಗಳಾದ ನೌಶಾದ್ ಕೆ, ಅಜೀಶ್ ಸಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮಂಜುನಾಥನ್ ವಿ, ಅತುಲ್ ಟಿ.ವಿ, ರೀನಾ ವಿ, ಸಜೀಶ್ ಎಂಬವರನ್ನೊ ಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
ಇದೇ ಪ್ರಕರಣದ ಇನ್ನೋರ್ವ ಆರೋಪಿ ಬಡಾಜೆ ನಿವಾಸಿ ಮೊಯ್ದೀನ್ ಯಾಸಿರ್ ಎಂಬಾತ ಈ ವೇಳೆ ತಪ್ಪಿಸಿಕೊಂಡಿದ್ದನೆಂದೂ .ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅದರಿಂದಾಗಿ ಆತನ ಮನೆಯನ್ನು ತಪಾಸಣೆ ನಡೆಸಿದಾಗ ಅಲ್ಲಿಂದ 320 ಗ್ರಾಂ ಹ್ಯಾಶಿಶ್ ಪತ್ತೆಹಚ್ಚಲಾಗಿದೆ. ಹೀಗೆ ಒಟ್ಟು 450 ಗ್ರಾಂ ಮಾದಕವಸ್ತುವನ್ನು ವಶಪಡಿಸಲಾಗಿದೆ ಯೆಂದು ಅವರು ತಿಳಿಸಿದ್ದಾರೆ.