ಉಪ್ಪಳ: ಬದಿಯಡ್ಕ ಸಮೀಪ ಮಾವಿನಕಟ್ಟೆಯಲ್ಲಿ ನಿನ್ನೆ ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಗಾಯಗೊಂಡ ಮಂಗಲ್ಪಾಡಿ ಬಳಿಯ ನಿವಾಸಿ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟರು.
ಮಂಗಲ್ಪಾಡಿ ಪ್ರತಾಪನಗರ ಮದ್ರಸ ಬಳಿಯ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಮುಬಾಶಿರ್ (21) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಕುಂಬಳೆ- ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ನಿನ್ನೆ ಬೆಳಿಗ್ಗೆ ೮.೪೫ರ ವೇಳೆ ಖಾಸಗಿ ಬಸ್ ಹಾಗೂ ಕಾರು ಢಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಮುಬಾಶಿರ್ ಗಂಭೀರ ಗಾಯಗೊಂಡಿ ದ್ದರು. ಕೂಡಲೇ ಚೆಂಗಳದ ಆಸ್ಪತ್ರೆಗೂ ಬಳಿಕ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೂ ಅದು ಫಲಕಾರಿಯಾಗದೆ ಅವರು ರಾತ್ರಿ ವೇಳೆ ಮೃತಪಟ್ಟರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಲಾಗಿದೆ. ಗಲ್ಫ್‌ನಲ್ಲಿ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮುಬಾಶಿರ್ ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಮುಂದಿನ ತಿಂಗಳ 6ರಂದು ಮರಳಿ ಗಲ್ಫ್‌ಗೆ ತೆರಳಲು ನಿರ್ಧರಿಸಿದ್ದರು. ಸ್ನೇಹಿತನನ್ನು ಕಾಣಲೆಂದು ತಿಳಿಸಿ ನಿನ್ನೆ ಬೆಳಿಗ್ಗೆ ಇವರು ಕಾರಿನಲ್ಲಿ ತೆರಳಿದ್ದರು. ಈ ಮಧ್ಯೆ ಅಪಘಾತ ಸಂಭವಿಸಿದೆ. ಮುಬಾಶಿರ್‌ರ ಸಾವಿನಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಮೃತರು ತಂದೆ, ತಾಯಿ ಝೀನತ್, ಸಹೋದರ ಮೆಹರೂಫ್, ಸಹೋದರಿ ಜಫ್ರೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







