ಇದ್ದ ಇಬ್ಬರು ವೈದ್ಯರುಗಳ ವರ್ಗಾವಣೆ: ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರ ನಾಮಮಾತ್ರ; ರೋಗಿಗಳಿಗೆ ಸಮಸ್ಯೆ

ಬದಿಯಡ್ಕ: ಇದ್ದದ್ದೇ ಇಬ್ಬರು ವೈದ್ಯರು. ಅವರು ಕೂಡಾ ಬೇರೆಡೆಗೆ ವರ್ಗಾವಣೆಗೊಂಡಿರುವುದರಿಂದ ಸರಕಾರದ ಚಿಕಿತ್ಸಾ ಕೇಂದ್ರವೊಂದು ಕೇವಲ ನಾಮಮಾತ್ರಕ್ಕೆ ಉಳಿದುಕೊಂ ಡಿದೆ. ಇದು ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದ ದುಸ್ಥಿತಿಯಾಗಿದೆ.

ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಇದ್ದದ್ದು ಕೇವಲ ಇಬ್ಬರು ವೈದ್ಯರುಗಳು. ಅದರಲ್ಲೊಬ್ಬರನ್ನು ಸರಕಾರ ಈ ಹಿಂದೆಯೇ ಬೇರೆಡೆಗೆ ವರ್ಗಾಯಿಸಿತ್ತು. ಬಳಿಕ ಡಾ| ನಿರಂಜನ ಎಂಬವರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರನ್ನು ಕೂಡಾ ಇದೀಗ ಇಡುಕ್ಕಿ ಮರಿಯಾಪುರಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಇದರಿಂದ ಪ್ರಸ್ತುತ ಆಸ್ಪತ್ರೆಯಲ್ಲಿ ಈಗ ವೈದ್ಯರು ಇಲ್ಲದ ಸ್ಥಿತಿಯಾಗಿದೆ.

ಕುಂಬ್ಡಾಜೆ ಮಾತ್ರವಲ್ಲದೆ ನೆರೆಯ ಪಂಚಾಯತ್‌ಗಳಿಂದಲೂ ಇಲ್ಲಿಗೆ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿ ದ್ದಾರೆ. ಹೀಗೆ ಪ್ರತಿದಿನ ಸುಮಾರು 200ರಿಂದ 300ರಷ್ಟು ರೋಗಿಗಳು ಚಿಕಿತ್ಸೆಗಾಗಿ ಆಶ್ರಯಿಸುತ್ತಿರುವ ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದಾಗಿರುವುದು ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಎಂಡೋಸಲ್ಫಾನ್ ಪೀಡಿತ ಪ್ರದೇಶ ವೊಂದರ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಅಭಾವ ಕಾಡುತ್ತಿರುವುದು ಜನರಲ್ಲಿ ಭಾರೀ ಅಸಮಾಧಾನಕ್ಕೂ ಕಾರಣವಾ ಗಿದೆ. ಮಾತ್ರವಲ್ಲ, ವೈದ್ಯರುಗಳಿಲ್ಲದ ಆಸ್ಪತ್ರೆ ಮುಚ್ಚುಗಡೆಗೊಳ್ಳಬಹುದೇ ಎಂಬ ಆತಂಕವೂ ಕಾಡತೊಡಗಿದೆ.

ಕಾಸರಗೋಡಿನ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಹಿಂಜರಿಯುವವರೇ ಹೆಚ್ಚು ಎಂಬ ಆರೋಪ ಈ ಹಿಂದೆಯೇ ಕೇಳಿ ಬಂದಿದೆ. ಇಲ್ಲಿ ನೇಮಕಗೊಂಡರೂ ಕೆಲವೇ ದಿನಗಳಲ್ಲಿ ಅವರು ವರ್ಗಾವಣೆ ಪಡೆದು ಹೋಗುತ್ತಿರುವುದು ಕೂಡಾ ಸಾಮಾನ್ಯವಾಗಿದೆ. ಇದು ಸರಕಾರದ ಗಮನಕ್ಕೂ ಬಂದ ಸಂಗತಿಯಾಗಿದೆ. ಆದ್ದರಿಂದ ಕಾಸರಗೋಡಿನಲ್ಲಿ ಸೇವೆಗೆ ನೇಮಕಗೊಳ್ಳುವ ವೈದ್ಯರುಗಳನ್ನು ಮೂರು ವರ್ಷಕ್ಕೆ ವರ್ಗಾವಣೆ ಗೊಳಿಸುವುದಿಲ್ಲ ಎಂಬುದಾಗಿ  ಈ ಹಿಂದೆ ಆರೋಗ್ಯ ಸಚಿವೆ ಇಲ್ಲಿನ ಜನತೆಗೆ ಭರವಸೆ ನೀಡಿದ್ದರು. ಆದರೆ ಇದೀಗ ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದ ವೈದ್ಯರನ್ನು ವರ್ಗಾಯಿಸಿ ಆರೋಗ್ಯ ಇಲಾಖೆಯಿಂದ ಆದೇಶ ಬಂದಿದೆ. ಕಾಸರಗೋಡು ಜನರಲ್ ಆಸ್ಪತ್ರೆಯ ತುರ್ತು ನಿಗಾ ವಿಭಾಗದ ಮೆಡಿಕಲ್ ಆಫೀಸರ್ ಡಾ| ಡಿ. ದೃಶ್ಯ, ಅಸಿ. ಸರ್ಜನ್ ಡಾ| ನಿಶಾ ಜಿ ನಾಯರ್ ಎಂಬಿವರನ್ನು ಕೂಡಾ ಬೇರೆಡೆಗೆ ವರ್ಗಾಯಿಸಲಾಗಿದೆ. ಇತರ ಜಿಲ್ಲೆಗಳಲ್ಲಿ ನಡೆಯುವ ವರ್ಗಾವಣೆಗೆ ಅನುಸಾರವಾಗಿ ಬದಲಿ ನೇಮಕಾತಿ ನಡೆಸಲಾಗುತ್ತಿದೆ. ಆದರೆ ಕಾಸರ ಗೋಡಿನಿಂದ ವರ್ಗಾವಣೆಗೊಂಡ ಈ ಮೂವರ ಬದಲಿಗೆ ಬೇರೆ ಯಾರನ್ನೂ ನೇಮಿಸಿಲ್ಲ ಎಂಬುವುದು ಗಮನಾರ್ಹವಾಗಿದೆ.

Leave a Reply

Your email address will not be published. Required fields are marked *

You cannot copy content of this page