ಗಾಂಜಾ ಪ್ರಕರಣದ ಆರೋಪಿಗೆ ಎರಡು ವರ್ಷ ಕಠಿಣ ಸಜೆ, ಜುಲ್ಮಾನೆ
ಕಾಸರಗೋಡು: ಗಾಂಜಾ ಪ್ರಕರ ಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಪ್ರಿಯಾ ಕೆ. ಅವರು ಎರಡು ವರ್ಷ ಕಠಿಣ ಸಜೆ ಹಾಗೂ 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಬೇಕಲ ಪೊಲೀಸ್ ಠಾಣೆ ಸಮೀಪ ‘ಕ್ವಾರ್ಟರ್ಸ್ ಪಳ್ಳಿಕರೆ’ಯ ನಿವಾಸಿ ಶಾಯೀಸ್ ಅಲ್ ಅಮೀನ್ (30) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. 2017 ಆಗಸ್ಟ್ 18ರಂದು ಕಾಸರಗೋಡು ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಅಂದು ಕಾಸರಗೋಡು ಪೊಲೀಸ್ ಠಾಣೆ ಎಸ್.ಐ ಆಗಿದ್ದ ಅಜಿತ್ ಕುಮಾರ್ ಪಿ. ರ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ ನಂಬ್ರ ಪ್ಲೇಟ್ ಇಲ್ಲದ ಬೈಕ್ನಲ್ಲಿ ಸಾಗಿಸಲಾಗುತ್ತಿದ್ದ ೧.೨೫೦ ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಶಾಯೀಸ್ ಅಲ್ ಅಮೀನ್ನನ್ನು ಪೊಲೀಸರು ಬಂಧಿಸಿ ಆತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು.
ಆ ಪ್ರಕರಣದಲ್ಲಿ ನ್ಯಾಯಾಲಯ ಆತನಿಗೆ ಈ ಶಿಕ್ಷೆ ವಿಧಿಸಿದೆ. ಅಂದು ಕಾಸರಗೋಡು ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಅಬ್ದುಲ್ ರಹೀಂ ಸಿ.ಎ. ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲ ಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಚಂದ್ರಮೋಹನ್ ಜಿ. ಮತ್ತು ನ್ಯಾಯವಾದಿ ಚಿತ್ರಕಲ ನ್ಯಾಯಾಲಯದಲ್ಲಿ ವಾದಿಸಿದ್ದರು.