ಫ್ಲೈಓವರ್ ಕಾಮಗಾರಿ ಪ್ರಗತಿಯಲ್ಲಿ : ಬದಲಾಗುತ್ತಿದೆ ನಗರದ ಮುಖಛಾಯೆ
ಕಾಸರಗೋಡು: ಕಾಸರಗೋಡು ನಗರದ ಹೃದಯ ಭಾಗದಲ್ಲಿ ಫ್ಲೈಓವರ್ ನಿರ್ಮಾಣ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ತಲಪಾಡಿ ಚೆಂಗಳ ರೀಚ್ನಲ್ಲಿ ಬರುವ ಅತ್ಯಂತ ಉದ್ದದ ಫ್ಲೈಓವರ್ ರಸ್ತೆ ಈಗಾಗಲೇ ಕೆಲವು ಕಡೆ ಪೂರ್ಣತೆಯತ್ತ ಸಾಗಿದೆ. ಕರಂದಕ್ಕಾಡ್ನಿಂದ ಆರಂಭಿಸಿ ನುಳ್ಳಿಪ್ಪಾಡಿವರೆಗಿರುವ ಫ್ಲೈಓವರ್ ರಾಜ್ಯದಲ್ಲೇ ಏಕ ಕಂಬದಲ್ಲಿ ನಿರ್ಮಿಸುವ ಅತ್ಯಂತ ಉದ್ದದ ಫ್ಲೈಓವರ್ ಆಗಿದೆ. ಮಧ್ಯದಲ್ಲಿ ಒಂದು ಕಂಬ ನಿರ್ಮಿಸಿ ಅದರ ಮೇಲೆ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಲಿದೆ. ಕರಂದಕ್ಕಾಡಿನಲ್ಲಿ ಸ್ವಲ್ಪ ದೂರ ಕೆಲಸ ಪೂರ್ಣಗೊಂಡಿದೆ. ಈ ಫ್ಲೈಓವರ್ ಸಂಪೂರ್ಣವಾದಾಗ ಕಾಸರಗೋಡು ನಗರದ ಮುಖಛಾಯೆ ಬದಲಾಗಲಿದೆ. ಈಗಾಗಲೇ ಹಲವಾರು ಬದಲಾವಣೆಗಳು ನಗರದಲ್ಲಿ ಕಂಡು ಬರುತ್ತಿದೆ.
ಹೆದ್ದಾರಿ ಅಭಿವೃದ್ಧಿ ಅನಿವಾರ್ಯವಾಗಿದ್ದು, ಆದರೆ ಈ ವೇಳೆ ಸಂಚಾರ ಸಮಸ್ಯೆಯೂ ತಲೆದೋರುತ್ತಿದೆ. ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯಾದಾಗ ಸರ್ವೀಸ್ ರಸ್ತೆ ನಿರ್ಮಿಸಿ ವಾಹನಗಳಿಗೆ ಸಂಚರಿಸಲು ಬಿಡಲಾಗುತ್ತಿದೆ. ಆದರೆ ಕಾಮಗಾರಿಯ ರೀತಿಗನುಸಾರವಾಗಿ ಕೆಲವೊಮ್ಮೆ ಕೆಲವು ಕಡೆಗಳಲ್ಲಿ ತಡೆ ಸೃಷ್ಟಿಸಲಾಗುತ್ತಿದೆ. ಇದನ್ನು ಪೂರ್ವಸೂಚನೆ ನೀಡದೆ ನಡೆಸುತ್ತಿರುವುದರಿಂದಾಗಿ ಸಾರಿಗೆ ತಡೆ ಉಂಟಾಗುತ್ತಿದೆ. ಇದು ಜನರಿಗೆ ಸಮಸ್ಯೆಯನ್ನು ತರುತ್ತಿದೆ. ಅಭಿವೃದ್ಧಿ ಕಾಮಗಾರಿ ಮುಗಿಯುವವರೆಗೂ ಈ ಸಮಸ್ಯೆ ಮುಂದುವರಿಯಬಹು ದಾಗಿದ್ದು, ಆದರೆ ಸಂಬಂಧಪಟ್ಟವರು ಅತ್ಯಂತ ಕನಿಷ್ಟ ಸಮಸ್ಯೆ ಉಂಟಾಗುವ ರೀತಿಯಲ್ಲಿ ಸಂಚಾರ ವ್ಯವಸ್ಥೆ ಮಾಡಿಕೊಡಬೇಕೆಂಬುದು ಸ್ಥಳೀಯರ ನಿರೀಕ್ಷೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಮುಗಿದಾಗ ಕಾಸರಗೋಡು ನಗರದ ಚಿತ್ರಣವೇ ಬದಲಾಗಲಿದೆ ಎಂಬುದಕ್ಕೆ ಯಾವುದೇ ಸಂಶಯವಿಲ್ಲ.