ಆದೂರಿನಲ್ಲಿ ಶೂ ಧರಿಸಿ ತರಗತಿಗೆ ತಲುಪಿದ ಪ್ಲಸ್ ವನ್ ವಿದ್ಯಾರ್ಥಿಗೆ ಹಲ್ಲೆ: 5ಪ್ಲಸ್ ಟು ವಿದ್ಯಾರ್ಥಿಗಳ ವಿರುದ್ಧ ಕೇಸು
ಮುಳ್ಳೇರಿಯ: ಶಾಲೆಗೆ ಶೂಸ್ ಧರಿಸಿ ತಲುಪಿದ ಪ್ಲಸ್ ವನ್ ವಿದ್ಯಾರ್ಥಿಯನ್ನು ಕ್ರೂರವಾಗಿ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಪ್ಲಸ್‌ವನ್ ಕಾಮರ್ಸ್ ವಿದ್ಯಾರ್ಥಿ ನೀಡಿದ ದೂರಿನಂತೆ ಪ್ಲಸ್ ಟು ವಿದ್ಯಾರ್ಥಿಗಳಾದ ೫ ಮಂದಿ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಶುಕ್ರವಾರ ಅಪರಾಹ್ನ 1.30ರ ವೇಳೆ ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಕರಣ ನಡೆದಿದೆ. ಶೂಸ್ ಧರಿಸಿ ತರಗತಿಗೆ ತಲುಪಿದ ಪ್ಲಸ್ ವನ್ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳಾದ ೫ ಮಂದಿ ತಡೆದು ನಿಲ್ಲಿಸಿ ಅಸಭ್ಯವಾಗಿ ನಿಂದಿಸಿರುವುದು ಪ್ರಕರಣಕ್ಕೆ ನಾಂದಿಯಾಗಿದೆ. ಇದೇ ವೇಳೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದು, ಕೈಯಿಂದ ಹಲ್ಲೆಗೈದು, ದೂಡಿಹಾಕಿ ಬಳಿಕ ಬೆಂಚನ್ನು ದೇಹಕ್ಕೆ ಎತ್ತಿಹಾಕಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಕೈಗೆ ಗಂಭೀರ ಗಾಯಗೊಂಡ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದ್ದು, ಪೊಲೀಸರು ಕೇಸು ದಾಖಲಿಸಿದ್ದಾರೆ.
ಕುಂಡಂಗುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ ಇದಕ್ಕೆ ಸಮಾನವಾದ ಘಟನೆ ನಡೆದಿದೆ. ಇಲ್ಲಿ ಟೀ ಶರ್ಟ್ ಧರಿಸಿ ತರಗತಿಗೆ ತಲುಪಿದ ಪ್ಲಸ್ ವನ್ ವಿದ್ಯಾರ್ಥಿಯನ್ನು ಪ್ಲಸ್ ಟು ವಿದ್ಯಾರ್ಥಿಗಳು ಹಲ್ಲೆಗೈದಿರುವುದಾಗಿ ದೂರಿದ್ದು, ಬೇಡಡ್ಕ ಪೊಲೀಸರು ೮ ಮಂದಿ ವಿರುದ್ಧ ಜುವೈನಲ್ ಜಸ್ಟೀಸ್ ಬೋರ್ಡ್‌ಗೆ ವರದಿ ನೀಡಿದ್ದಾರೆ.