ಕಾಸರಗೋಡು: ಕಾಡುಗಳ್ಳ ವೀರಪ್ಪನ್ ಮತ್ತು ಕುಖ್ಯಾತ ಚೋರ ಕಾಯಂಕುಳಂ ಕೊಚ್ಚುಣ್ಣಿ ಎಂಬವರನ್ನೂ ಮೀರಿಸುವ ರೀತಿಯ ಲೂಟಿ, ಅವ್ಯವಹಾರ ಹಾಗೂ ಭ್ರಷ್ಟಾಚಾರದತ್ತ ಇಂದು ಕೇರಳ ಸಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲ ಕುಟ್ಟಿ ಹೇಳಿದ್ದಾರೆ. ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯಾದ ಪ್ರಕರಣದ ನೈತಿಕ ಹೊಣೆ ಹೊತ್ತು ರಾಜ್ಯ ಮುಜರಾಯಿ ಖಾತೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸ ಬೇಕು, ತಿರುವಿದಾಂಕೂರ್ ದೇವಸ್ವಂ ಮಂಡಳಿಯನ್ನು ಬರ್ಖಾಸ್ತುಗೊಳಿ ಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿಕೊಂಡ ಬಿಜೆಪಿಯ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಿನ್ನೆ ಕಾಸರಗೋಡು ಜಿಲ್ಲಾಧಿಕಾರಿಯವರ ಕಚೇರಿಗೆ ನಡೆದ ಮಾರ್ಚನ್ನು ಉದ್ಘಾಟಿಸಿ ಅಬ್ದುಲ್ಲ ಕುಟ್ಟಿ ಮಾತನಾಡುತ್ತಿದ್ದರು.
ಟಿಪ್ಪು ಸುಲ್ತಾನ್ ಮತ್ತು ಮೊಘಲರು ಭಾರತದ ದೇಗುಲಗಳನ್ನು ಲೂಟಿ ಗೈದಿರುವುದು ಒಂದು ಚರಿತ್ರೆಯಾದರೆ, ಅದೇ ರೀತಿ ಇಂದು ಶಬರಿಮಲೆ ದೇಗುಲವನ್ನು ಪಿಣರಾಯಿ ವಿಜಯನ್‌ರ ನೇತೃತ್ವದ ಎಡರಂಗ ಸರಕಾರ ಲೂಟಿಗೈಯ್ಯತೊಡಗಿದೆ. ಇದರಿಂದಾಗಿ ಶಬರಿಮಲೆಯನ್ನು ಲೂಟಿಗೈದ ಎಡರಂಗ ಸರಕಾರ ಕೇರಳದಲ್ಲಿ ಇತ್ತು ಎಂಬುವುದನ್ನು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕದಲ್ಲಿ ಕಲಿಯಬೇಕಾಗಿ ಬರಲಿದೆ. ಹಿಂದುಗಳು ಕಿರುಕುಳ ಕ್ಕೊಳಗಾಗುತ್ತಿರುವ ರಾಜ್ಯವಾಗಿ ಕೇರಳ ಇಂದು ಬದಲಾಗಿದೆ. ಕೇವಲ ಶಬರಿ ಮಲೆಯಲ್ಲಿ ಮಾತ್ರವಲ್ಲ ಮುಜರಾಯಿ ಮಂಡಳಿಯ ಇತರ ದೇಗುಲಗಳಲ್ಲೂ ಇಂತಹ ಲೂಟಿಗಳು ನಡೆಯುತ್ತಿವೆ. ಭಾರತದಲ್ಲಿ ಹಿಂದುಗಳನ್ನು ಹೊರತು ಪಡಿಸಿ ಇತರ ಎಲ್ಲಾ ಧರ್ಮಗಳ ಆರಾಧನಾಲಯಗಳು ನಡೆಸಿಕೊಂಡು ಬರುತ್ತಿರುವುದು ಆಯಾ ಧರ್ಮೀಯರೇ ಆಗಿದ್ದಾರೆ. ಆದರೆ ಹಿಂದುಗಳ ಆರಾಧನಾಲಯಗಳಲ್ಲಿ ಮಾತ್ರ ದೇವರ ಮೇಲೆ ನಂಬುಗೆ ಇಲ್ಲದ ನಾಸ್ತಿಕರಾದ ಕಮ್ಯುನಿಸ್ಟರು ಮತ್ತು ಆಚಾರ ವಿರೋಧಿಗಳಾದ ರಾಜಕಾರಣಿಗಳು ಆಡಳಿತ ನಡೆಸುತ್ತಿದ್ದಾರೆ. ಇತರ ಧರ್ಮೀಯರು ಹೊಂದಿರುವ ಹಕ್ಕುಗಳ ಹಾಗೇ ಹಿಂದೂ ದೇಗುಲಗಳನ್ನು ನಡೆಸುವ ಅಧಿಕಾರವನ್ನು ಹಿಂದುಗಳಿಗೇ ವಹಿಸಿಕೊಡಬೇಕು. ಅದಕ್ಕಾಗಿ ಕಾಶ್ಮೀರದ ೩೭೦ನೇ ವಿಧಿ ರದ್ದುಪಡಿಸಿದ ರೀತಿಯ ಧೈರ್ಯಯುತವಾದ ರೀತಿಯ ಕಾನೂನು ಜ್ಯಾರಿಗೊಳಿಸ ಬೇಕು. ಅಯ್ಯಪ್ಪ ಶಾಪದಿಂದ ಪಾರಾಗುವ ಉದ್ದೇಶದಿಂದಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಬೆಂಬಲಿಗರು ಸೇರಿ ಶಬರಿಮಲೆಯಲ್ಲಿ ಜಾಗತಿಕ ಅಯ್ಯಪ್ಪ ಸಂಗಮ ನಡೆಸಿದ್ದಾರೆಂದು ಅಬ್ದುಲ್ಲಕುಟ್ಟಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಸಭೆಯ ಅಧ್ಯಕ್ಷತೆ ವಹಿಸಿದರು. ಬಿಜೆಪಿಯ ರಾಜ್ಯ ಸೆಲ್ ಕೋರ್ಡಿನೇಟರ್ ನ್ಯಾಯವಾದಿ ಪಿ.ಕೆ. ಸಜೀವನ್, ಇತರ ಜಿಲ್ಲಾ ನೇತಾರರಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ ಮಾತನಾಡಿದರು. ವಿದ್ಯಾನಗರದಿಂದ ಕಲೆಕ್ಟ್ರೇಟ್‌ಗೆ ಸಾಗಿಸಿದ ಪ್ರತಿಭಟನಾ ಮೆರವಣಿಗೆಗೆ ಬಿಜೆಪಿ ಜಿಲ್ಲಾ ನೇತಾರರಾದ ಪಿ. ರಮೇಶ್, ಎಸ್.ಆರ್. ಸುಖನ್ಯ, ಎಂ. ಭಾಸ್ಕರನ್ ಸೇರಿದಂತೆ ಹಲವರು ನೇತೃತ್ವ ನೀಡಿದರು. ಮಾರ್ಚ್‌ನ ವೇಳೆ ಪೊಲೀಸರು ನಿರ್ಮಿಸಿದ ಬಾರಿಕೇಡನ್ನು ಭೇದಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಚದುರಿಸುವಂತೆ ಮಾಡಲು ಪೊಲೀಸರು ಜಲಪಿರಂಗಿ ಪ್ರಯೋಗ ನಡೆಸಿದರು.






