ನೆಲ್ಲಿಕುಂಜೆಗುತ್ತುನಲ್ಲಿ ಮುರಿದು ಬಿದ್ದ ಕಾಲುಸಂಕ ವಿದ್ಯಾರ್ಥಿಗಳ ಸಹಿತ ಸಂಚಾರಕ್ಕೆ ಸಮಸ್ಯೆ

ಉಕ್ಕಿನಡ್ಕ: ಕಾಲುಸಂಕ ಮುರಿದು ಬಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬದಿಯಡ್ಕ ಪಂಚಾಯತ್‌ನ ಹಳೆಯ 5ನೇ ವಾರ್ಡ್ (ಈಗ 9ನೇ ವಾರ್ಡ್) ನೆಲ್ಲಿಕುಂಜೆಗುತ್ತು ಎಂಬಲ್ಲಿ ನಿರ್ಮಿಸಿದ್ದ ಕಾಲು ಸಂಕ ಮುರಿದು ಬಿದ್ದಿದೆ. ೨೦೦೦-೨೦೦೫ನೇ ವರ್ಷದ ಯೋಜನೆಯಲ್ಲಿ ಈ ಕಾಲುಸಂಕ ನಿರ್ಮಿಸಲಾಗಿತ್ತು. ತೋಡಿನ ಬದಿಯ ತಡೆಗೋಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸಂಕದ ಸ್ಲ್ಯಾಬ್ ಕೆಳಗೆ ಬಿದ್ದಿದೆ. ಇದರಿಂದಾಗಿ ನೆಲ್ಲಿಕುಂಜೆ, ಕಜಂಪಾಡಿ ಸಹಿತ ವಿವಿಧ ಪ್ರದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪ್ರದೇಶದಿಂದ ಉಕ್ಕಿನಡ್ಕ, ಕಾಟುಕುಕ್ಕೆ, ಪೆರ್ಲ, ಬದಿಯಡ್ಕ, ನೀರ್ಚಾಲು ಸಹಿತ ವಿವಿಧ ಶಿಕ್ಷಣ ಕೇಂದ್ರಗಳಿಗೆ ತೆರಳುವ ಮಕ್ಕಳು ಕೂಡಾ ಇನ್ನು ಸಂಚರಿಸಲು ತೊಂದರೆಪಡಬೇಕಾದ ಸ್ಥಿತಿ ಇದೆ. ಕಾಲು ಸಂಕ ಮುರಿದು ಬಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ದಿನನಿತ್ಯ ಕೂಲಿ ಕೆಲಸಗಳಿಗೆ ತೆರಳುವವರು, ಹಿರಿಯರು ವಿವಿಧ ಅಗತ್ಯಗಳಿಗೆ ಸುತ್ತುಬಳಸಿ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪಂಚಾಯತ್ ಈ ಕಾಲುಸಂಕ ಪುನರ್‌ನಿರ್ಮಿಸಲು ಕೂಡಲೇ ನಿಧಿ ಮಂಜೂರು ಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page