ಕಾಸರಗೋಡು: ಕೋಟಿಕುಳಂನಲ್ಲಿ ವ್ಯಕ್ತಿಯೋರ್ವರ ಮಾಲಕತ್ವದಲ್ಲಿರುವ ಕಟ್ಟಡಗಳಿಂದ ಪತ್ತೆಹಚ್ಚಿದ ಪ್ರಾಚ್ಯವಸ್ತು ಸಂಗ್ರಹದಲ್ಲಿ ಅಮೂಲ್ಯ ವಸ್ತುಗಳು, ವಿದೇಶದಿಂದ ತಂದ ಸಾಮಗ್ರಿಗಳು ಇದೆ ಎಂದು ಖಚಿತಪಡಿಸಲಾಗಿದೆ. ಆರ್ಕಿಯೋಲಜಿಕಲ್ ಸರ್ವೆ ಆಫ್ ಇಂಡಿಯದ ತೃಶೂರ್ ವಲಯ ಕಚೇರಿ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಈ ವಿಷಯ ಖಚಿತಪಡಿಸಲಾಗಿದೆ. ಬಂದೂಕುಗಳು, ತಲವಾರುಗಳು, ವಿವಿಧ ಪಾತ್ರೆಗಳು ಸಹಿತ ಹಲವಾರು ಸಾಮಗ್ರಿಗಳನ್ನು ದಿ| ಮುಹಮ್ಮದ್ ಕುಂಞಿಯ ಮಾಲಕತ್ವದಲ್ಲಿರುವ ಮನೆ ಹಾಗೂ ಕೊಠಡಿಯೊಂದರಿಂದ ಪತ್ತೆಹಚ್ಚಲಾಗಿತ್ತು. ಇವುಗಳಲ್ಲಿ ಕೆಲವು ಸಾಮಗ್ರಿಗಳು ವಿದೇಶ ನಿರ್ಮಿತವಾಗಿದೆ ಎಂದು, ಕೊಲ್ಲಿ ಅಥವಾ ಇತರ ದೇಶಗಳಿಂದ ಇದನ್ನು ತಂದಿರಬೇಕೆಂದು ಪ್ರಾಚ್ಯವಸ್ತು ತಜ್ಞರು ಪತ್ತೆಹಚ್ಚಿದ್ದಾರೆ. ಈ ಬಗ್ಗೆ ಪ್ರಾಚ್ಯವಸ್ತು ಅಧಿಕಾರಿಗಳು ಬೇಕಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವರದಿಯನ್ನು ಮುಂದಿನ ಕ್ರಮಗಳಿಗಾಗಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಗಿದೆ. ವರದಿ ಪ್ರಕಾರ ಪ್ರಾಚ್ಯವಸ್ತುಗಳೆಂದು ಖಚಿತಪಡಿಸಿದ ಸಾಮಗ್ರಿಗಳನ್ನು ಅಧಿಕಾರಿಗಳು ವಶಪಡಿಸುವರು. ಆಗಸ್ಟ್ 18ರಂದು ಬೇಕಲ ಪೊಲೀಸ್ ಠಾಣೆಯಿಂದ ಅನತಿ ದೂರದಲ್ಲಿರುವ ಹಳೆಯ ಮನೆ ಹಾಗೂ ಕೊಠಡಿಯೊಂದರಲ್ಲಿ ಪ್ರಾಚ್ಯ ವಸ್ತುಗಳ ಸಂಗ್ರಹ ಪತ್ತೆಹಚ್ಚಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಭಿಸಿದ ರಹಸ್ಯ ಮಾಹಿತಿಯ ಆಧಾರದಲ್ಲಿ ಬೇಕಲ ಪೊಲೀಸರು ಇಲ್ಲಿಗೆ ತಲುಪಿ ತಪಾಸಣೆ ನಡೆಸಿದ್ದರು. ಬಳಿಕ ಈ ಸ್ಥಳಕ್ಕೆ ಪೊಲೀಸ್ ಕಾವಲು ಏರ್ಪಡಿಸಲಾಗಿತ್ತು.







