ಕಾಬೂಲ್: ಅಪಘಾನಿಸ್ಥಾನದ ಅತೀ ದೊಡ್ಡ ನಗರವಾದ ಮಜರ್ ಇ ಶೆರೀಫ್ನಲ್ಲಿ 6.3 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದೆ ಯೆಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಜಿಕಲ್ ಸರ್ವೇ ತಿಳಿಸಿದೆ. ಭೂಮಿಯ 28 ಕಿ.ಮೀ. ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಬಾಲ್ಕ್ ಪ್ರಾಂತ್ಯದ ರಾಜಧಾನಿಯಾದ ಮಜರ್ ಇ. ಶೆರೀಫ್ ಪ್ರದೇಶದ ಸುಮಾರು 5,23,000 ಜನರು ವಾಸಿಸುತ್ತಿರುವ ಜನನಿಬಿಡ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದೆ. ಇದು ಭಾರೀ ಸಾವುನೋವುಗಳಿಗೂ ದಾರಿಮಾಡಿಕೊಟ್ಟಿದೆ.
ಈತನಕ ಲಭಿಸಿದ ವರದಿ ಪ್ರಕಾರ 7 ಮಂದಿ ಸಾವನ್ನಪ್ಪಿ ೧೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದ್ದಾರೆ. ಸ್ಥಳೀಯ ಕಾಲಮಾನ ಇಂದು ಮುಂಜಾನೆ 1 ಗಂಟೆ ಸುಮಾರಿಗೆ ಈ ಭೂಕಂಪ ಸಂಭವಿಸಿದೆಯೆಂದು ಅಪಘಾನಿಸ್ಥಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ ಮಾತ್ರವಲ್ಲ ಭಾರತ, ಪಾಕಿಸ್ಥಾನ, ತಜಕಿಸ್ಥಾನ, ಉಜ್ಬೇಕಿಸ್ಥಾನ್, ತುರ್ಕಾಮೆನಿಸ್ಥಾನ್ ಎಂಬೆಡೆಗಳಲ್ಲೂ ಭೂಮಿ ಕಂಪಿಸಿದೆಯೆಂದು ಸಂಬಂಧಪಟ್ಟ ವರದಿಗಳು ಸೂಚಿಸುತ್ತಿವೆ. ಹಾನಿಯ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ. ಭೂಕಂಪದ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 100ರಿಂದ 1000 ಸಂಭವನೀಯ ಸಾವುನೋವುಗಳನ್ನು ವರದಿಯಲ್ಲಿ ಅಂದಾಜಿಸಲಾಗಿದೆ. ಕಳೆದ ಅಗೋಸ್ತ್ನಲ್ಲಿ ಅಪಘಾನಿಸ್ಥಾನದ ಪರ್ವತ ಪ್ರದೇಶದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿ ಕನಿಷ್ಠ 2200 ಮಂದಿ ಮೃತಪಟ್ಟಿದ್ದರು ಮಾತ್ರವಲ್ಲದೆ 3000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಅಪಘಾನಿಸ್ಥಾನದಲ್ಲಿ ಇಂದು ಮುಂಜಾನೆ ಈ ಪ್ರಬಲ ಭೂಕಂಪ ಸಂಭವಿಸಿದೆ.






