ಕಾಸರಗೋಡು: ಕೇರಳ ಮುಸ್ಲಿಂ ನವೋದಯವನ್ನು ನಿರ್ಧರಿಸಿದ್ದು, ಸಮಸ್ತ ಕೇರಳ ಜಂಇಯತ್ತುಲ್ ಉಲಮ ಎಂದು ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನುಡಿದರು. ಕೇರಳ ಮುಸ್ಲಿಂ ಜಮಾಯತ್ ನೇತೃತ್ವದಲ್ಲಿ ಆರಂಭವಾದ ಕೇರಳ ಯಾತ್ರೆಗೆ ಚೆರ್ಕಳದಲ್ಲಿ ನೀಡಲಾದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಮುಸ್ಲಿಮರಿಗೆ ದಿಕ್ಸೂಚಿ ನೀಡಿದ ಮತ್ತು ಅವರನ್ನು ಸಂಘಟಿತ ಸಮುದಾಯವಾಗಿ ಮುನ್ನಡೆಸಿದ ಸಮಸ್ತದ ಕರ್ಮಫಲಗಳನ್ನು ಇತರ ಸಮುದಾಯಗಳು ವಿವಿಧ ರೀತಿಯಲ್ಲಿ ಅನುಭವಿಸಲು ಸಾಧ್ಯವಾಯಿತು. ಈ ಸಾಧನೆಗಳು ಮತ್ತು ಪ್ರಗತಿಯನ್ನು ಉಳಿಸಿಕೊಳ್ಳಲು ಒಗ್ಗಟ್ಟಿನ ಕಾರ್ಯಚಟುವಟಿಕೆಗಳು ಅನಿವಾರ್ಯವಾಗಿವೆ.
ಅರೇಬಿಯಾದಿಂದ ಬಂದ ಮಾಲಿಕ್ ಇಬ್ನ್ ದೀನಾರ್ ಮತ್ತು ಅವರ ತಂಡ ಸದಾಚಾರಿಗಳಾಗಿದ್ದು, ಕಾಸರಗೋಡಿನ ಇತಿಹಾಸ ಆ ಸ್ಮರಣೆಗಳನ್ನು ಒಳಗೊಂಡಿದೆ ಎಂದು ಅವರು ನುಡಿದರು. ಇಸ್ಲಾಂ ಎಂದರೆ ಪ್ರೀತಿ. ಜಗತ್ತಿನಲ್ಲಿ ಎಲ್ಲಾ ಧರ್ಮದವರಿಗೂ ಬದುಕಲು, ಇತರರಿಗೆ ನೋವಾಗದಂತೆ ತಮ್ಮ ಆದರ್ಶಗಳನ್ನು ಪ್ರಚಾರ ಮಾಡಲು ಹಕ್ಕಿದೆ. ನಾವೆಲ್ಲರೂ ಮನುಷ್ಯರು ಎಂಬ ಪರಿಗಣನೆಯನ್ನು ಕೈಬಿಡಬಾರದು. ಶಾಂತಿಯುತ ಜೀವನ ಪ್ರತಿಯೊಬ್ಬರ ಹಕ್ಕು ಹಾಗೂ ನಾಡಿಗೆ ಅತ್ಯಂತ ಅಗತ್ಯವಿರುವ ಪ್ರಗತಿ ಮತ್ತು ಶಾಂತಿಯಾಗಿದೆ ಎಂದರು.
ಸಯ್ಯದ್ ಅಲಿ ಬಾಫಕಿ ತಂಙಳ್ ಪ್ರಾರ್ಥನೆ ನಡೆಸಿದರು. ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಿದರು. ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಿದರು. ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಂ. ರಾಜಗೋಪಾಲನ್, ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್, ಎಕೆಎಂ ಅಶ್ರಫ್, ಚಿನ್ಮಯ ಮಿಷನ್‌ನ ಸ್ವಾಮಿ ವಿವಿಕ್ತಾನಂದ ಸರಸ್ವತಿ, ಫಾ| ಮ್ಯಾಥ್ಯು ಬೇಬಿ ಮಾರ್ತೊಮ, ಎಂ. ಅಬ್ದುಲ್ ರಹಿಮಾನ್, ಪಿ.ಕೆ. ಫೈಸಲ್, ಹಕೀಂ ಕುನ್ನಿಲ್, ಹರ್ಷಾದ್ ವರ್ಕಾಡಿ, ಅಜೀಜ್ ಕಡಪ್ಪುರಂ ಉಪಸ್ಥಿತರಿದ್ದರು. ಸಿ. ಮುಹಮ್ಮದ್ ಫೈಝಿ, ರಹಮತ್ತುಲ್ಲ ಸಖಾಫಿ ವಿಷಯ ಮಂಡಿಸಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಸ್ವಾಗತಿಸಿ, ಕಾಟಿಪ್ಪಾರ ಅಬ್ದುಲ್ ಕಾದಿರ್ ಸಖಾಫಿ ವಂದಿಸಿದರು. ಯಾತ್ರೆ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಈ ತಿಂಗಳ ೧೬ರಂದು ಸಂಜೆ ೫ ಗಂಟೆಗೆ ತಿರುವನಂತಪುರದ ಪುತ್ತರಿಕಂಡಂ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ.







