ಉಪ್ಪಳ: ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದು ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಉಪ್ಪಳ ಮಣ್ಣಂಗುಳಿ ಪಂಡಿಕುಡಿ ಹೌಸ್‌ನ ಹಮೀದ್ ಅಲಿ (65) ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊನ್ನೆ ರಾತ್ರಿ ೯ ಗಂಟೆ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್‌ಗೆ ತಲಪಾಡಿಯಲ್ಲಿ ಕಲ್ಲೆಸೆಯಲಾಗಿತ್ತು. ಇದರಿಂದ ಬಸ್‌ನ ಹಿಂಬದಿ ಗಾಜು ನಾಶಗೊಂಡಿದೆ. ಈ ಬಗ್ಗೆ ಬಸ್‌ನ ನೌಕರರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದಾಗ ಕಲ್ಲೆಸೆದಿರುವುದು ಹಮೀದ್ ಅಲಿ ಆಗಿದ್ದಾನೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಆತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ಇದೇ ವೇಳೆ ಬಸ್‌ಗೆ ಕಲ್ಲೆಸೆದ ಘಟನೆ ನಡೆದಿರುವುದು ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದುದರಿಂದ ಪ್ರಕರಣವನ್ನು ಉಳ್ಳಾಲ ಠಾಣೆಗೆ ಹಸ್ತಾಂತರಿಸಿ ಆರೋಪಿಯನ್ನು ಅಲ್ಲಿನ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.







