೩೮ ಲಕ್ಷ ರೂ. ಗಳೊಂದಿಗೆ ಸೌದಿಯಿಂದ ತಲೆಮರೆಸಿಕೊಂಡ ವ್ಯಕ್ತಿಗಾಗಿ ಶೋಧ
ಕಾಸರಗೋಡು: ಸೌದಿಯಿಂದ ಸಂಗ್ರಹಿಸಿದ ೩೮ ಲಕ್ಷ ರೂಪಾ ಯಿಗಳ ಹವಾಲಾ ಹಣದೊಂದಿಗೆ ಮಂಜೇಶ್ವರ ನಿವಾಸಿಯೆಂದು ಪರಿಚಯಗೊಂಡ ವ್ಯಕ್ತಿ ತಲೆಮರೆ ಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ಸೌದಿಯ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುವ ಕಲ್ಲಿಕೋಟೆ ನಿವಾಸಿಯನ್ನು ವಂಚಿಸಿ ವ್ಯಕ್ತಿ ಹಣದೊಂದಿಗೆ ಪರಾರಿಯಾ ಗಿರುವುದಾಗಿ ದೂರಲಾಗಿದೆ. ಮೂರು ವಾರಗಳ ಹಿಂದೆ ಕಲ್ಲಿಕೋಟೆ ನಿವಾಸಿಯ ಸಹಾಯದೊಂದಿಗೆ ಮಂಜೇಶ್ವರ ನಿವಾಸಿಯೆನ್ನಲಾದ ವ್ಯಕ್ತಿ ಸೌದಿಯಲ್ಲಿ ಹಲವರಿಂದ ಹಣ ಸಂಗ್ರಹಿಸಿದ್ದಾನೆನ್ನಲಾಗಿದೆ. ಹಣದೊಂದಿಗೆ ಅಲ್ಲಿಂದ ಮರಳಿದ ಬಳಿಕ ಆತನ ಕುರಿತಾದ ಯಾವುದೇ ಸುಳಿವು ಲಭಿಸಿರಲಿಲ್ಲ. ಎರಡು ವಾರಗಳ ನಂತರ ಸೌದಿಯ ವಾಸಸ್ಥಳಕ್ಕೆ ತಲುಪಿದ ವ್ಯಕ್ತಿ ಕಲ್ಲಿಕೋಟೆ ನಿವಾಸಿಯನ್ನು ಸಂಪರ್ಕಿಸಿ ೧೫ ಲಕ್ಷ ರೂಪಾಯಿ ಇರುವುದಾಗಿ ತಿಳಿಸಿ ಕಟ್ಟವೊಂದನ್ನು ನೀಡಿ ಮರಳಿದ್ದನು. ಆ ಕಟ್ಟವನ್ನು ತೆರೆದು ನೋಡಿದಾಗ ಅದರೊಳಗೆ ಟಿಶ್ಯೂ ಪೇಪರ್ ಇರಿಸಿರುವುದು ಪತ್ತೆಯಾಗಿದೆ. ಇದರಿಂದ ತಾನು ವಂಚನೆಗೀಡಾದ ಬಗ್ಗೆ ತಿಳಿದು ಕಲ್ಲಿಕೋಟೆ ನಿವಾಸಿ ಊರಲ್ಲಿರುವ ಸ್ನೇಹಿತರಲ್ಲಿ ವಿಷಯ ತಿಳಿಸಿದ್ದನು. ಅಲ್ಲದೆ ಆ ಬಗ್ಗೆ ಮಂಜೇಶ್ವರ ಪೊಲೀಸರನ್ನು ಸಂಪರ್ಕಿಸಿದ್ದರು. ಆದರೆ ಅಂತಹ ವ್ಯಕ್ತಿ ಇಲ್ಲಿಲ್ಲವೆಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ತಿಳಿಸಲಾಗಿದೆ. ಹಣದೊಂದಿಗೆ ತಲೆಮರೆಸಿಕೊಂಡ ವ್ಯಕ್ತಿ ಕಲ್ಲಿಕೋಟೆ ನಿವಾಸಿಗೆ ನಕಲಿ ವಿಳಾಸ ನೀಡಿ ಈ ವಂಚನೆ ನಡೆಸಿರಬಹುದೆಂದು ಅಂದಾಜಿಸಲಾಗಿದೆ.