ಮುಂಬೈ: ಮಹಾರಾಷ್ಟ್ರದ ಬಾರಾಮತಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಿಮಾನ ದುರಂತದಲ್ಲಿ ಎನ್‌ಸಿಪಿ ನೇತಾರ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್(66) ಸೇರಿದಂತೆ ಆರು ಮಂದಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಜಿಲ್ಲಾ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಬೆಳಿಗ್ಗೆ 8.10ಕ್ಕೆ ಲಿಯರ್‌ಜೆಟ್-45 ಎಂಬ ವಿಮಾನದಲ್ಲಿ ಅಜಿತ್ ಪವಾರ್ ಮತ್ತು ಇತರ ೫ ಮಂದಿ ಸಿಬ್ಬಂದಿಗಳು ಬಾರಾಮತಿಗೆ ತೆರಳಿದ್ದರು. ವಿಮಾನ ಅಲ್ಲಿ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ಬಿದ್ದು ಸ್ಫೋಟಗೊಂಡು ಸಂಪೂರ್ಣವಾಗಿ ಉರಿದುಹೋಗಿದೆ ಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರಿಂದ ಗಂಭೀರ ಸುಟ್ಟು ಗಾಯಗೊಂಡ ಅಜಿತ್ ಪವಾರ್ ಸೇರಿದಂತೆ 6 ಮಂದಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಮಹಾರಾಷ್ಟ್ರದ ಆರು ಸರಕಾರ ಗಳಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಅಜಿತ್ ಪವಾರ್ ಅತೀ ಹೆಚ್ಚು ಕಾಲ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನೇತಾರರಾಗಿದ್ದಾರೆ ಎಂಬ ಹಿರಿಮೆಯನ್ನು ಹೊಂದಿದ್ದಾರೆ. 8 ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಹಾಗೂ ಒಮ್ಮೆ ಲೋಕಸಭೆಗೂ ಆಯ್ಕೆಗೊಂಡಿದ್ದಾರೆ. ಮಹಾರಾಷ್ಟ್ರ ರಾಜಕೀಯದ ಅತಿಕಾಯರಾಗಿರುವ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಬಾರಾಮತಿ ಮಾತ್ರವಲ್ಲ ಮಹಾರಾಷ್ಟ್ರದಲ್ಲಿ ಭಾರೀ ಆತಂಕದ ವಾತಾವರಣ ಸೃಷ್ಟಿಸಿದೆ. ಜನರು ತಾಳ್ಮೆಯಿಂದಿರಲು ಸರಕಾರ ಮನವಿ ಮಾಡಿಕೊಂಡಿದೆ. ಅಪಘಾತಕ್ಕೆ ನಿಖರವಾದ ಕಾರಣ ಸ್ಪಷ್ಟಗೊಂಡಿಲ್ಲ. ತಾಂತ್ರಿಕ ದೋಷವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಉನ್ನತ ಮಟ್ಟದ ತನಿಖೆ ಆರಂಭಿಸಿದೆ. ಅಜಿತ್ ಪವಾರ್‌ರ ಅಗಲುವಿಕೆಗೆ ಪ್ರಧಾನಿ ನರೇಂದ್ರಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.







