ಬೆಳ್ಳೂರು: ಮನೆ ಅಂಗಳದಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಅಜ್ಞಾತ ಪ್ರಾಣಿ ಕಚ್ಚಿ ಕೊಂದು ಹಾಕಿದ ಘಟನೆ ನಡೆದಿದೆ. ನಾಟೆಕಲ್ಲು ಬಳಿಯ ಜಾಲಮೂಲೆ ಎಂಬಲ್ಲಿನ ಲೀಲಾ ಎಂಬವರ ಸಾಕು ನಾಯಿ ಸಾವಿಗೀಡಾಗಿದೆ. ನಾಯಿಯನ್ನು ಕೊಂದು ಅರೆಬರೆ ಮಾಂಸವನ್ನು ತಿಂದ ಸ್ಥಿತಿಯಲ್ಲಿ ಕಂಡು ಬಂದಿದೆ. ಇಂದು ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ನಾಯಿ ಸಾವಿಗೀಡಾಗಿರುವುದು ಕಂಡು ಬಂದಿದೆ.
ನಾಯಿಯ ದೇಹದಲ್ಲಿ ಅಜ್ಞಾತ ಪ್ರಾಣಿಯ ಕಡಿತದಿಂದ ಉಂಟಾದ ಗಾಯ ಕಂಡು ಬಂದಿದೆ. ಈ ಬಗ್ಗೆ ಮನೆಯವರು ನೀಡಿದ ಮಾಹಿತಿಯಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ. ಕಾರಡ್ಕ ಬ್ಲೋಕ್ ಪಂಚಾಯತ್ ಉಪಾಧ್ಯಕ್ಷೆ ಉಷಾ ಕೂಡಾ ಸ್ಥಳಕ್ಕೆ ತಲುಪಿದ್ದಾರೆ. ನಾಯಿಯನ್ನು ಚಿರತೆಯೇ ಕೊಂದುಹಾಕಿರಬಹುದೆಂದು ನಾಗರಿಕರು ಸಂಶಯಿಸುತ್ತಿದ್ದಾರೆ.
ನಾಯಿ ಮೇಲೆ ಯಾವ ಪ್ರಾಣಿ ದಾಳಿ ನಡೆಸಿಕೊಂದಿದೆ ಎಂದು ಅರಣ್ಯಾ ಧಿಕಾರಿಗಳ ಪರಿಶೀಲನೆ ಪೂರ್ಣಗೊಂಡ ಬಳಿಕವೇ ಖಚಿತಪಡಿಸಬೇಕಾಗಿದೆ. ನಾಲ್ಕು ದಿನಗಳ ಹಿಂದೆ ಕಾರಡ್ಕ ಪಂಚಾಯತ್‌ನ ೪ನೇ ವಾರ್ಡ್ ಆಲಂತಡ್ಕ ಜಯನಗರದಲ್ಲಿ ಚಿರತೆ ಕಂಡು ಬಂದಿರುವುದಾಗಿ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿ ಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ ಬಳಿಕ ಚಿರತೆಯನ್ನು ಹಿಡಿಯಲು ಗೂಡು ಇರಿಸಿದ್ದಾರೆ. ಆದರೆ ಚಿರತೆ ಅದರಲ್ಲಿ ಸಿಲುಕಿಲ್ಲ. ಇದರಿಂದ ಜಯನಗರ ಭಾಗದ ಜನರಲ್ಲಿ ಆತಂಕ ಹುಟ್ಟಿಕೊಂಡಿತ್ತು. ಅದರ ಬೆನ್ನಲ್ಲಿ ನಾಟೆಕಲ್ಲು ಸಮೀಪದಲ್ಲೂ ಸಾಕುನಾಯಿಯನ್ನು ಅಜ್ಞಾತ ಪ್ರಾಣಿ ಕೊಂದು ಹಾಕಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.






