ಹೊಸಂಗಡಿ: ವಸತಿಗೃಹಕ್ಕೆ ಅತಿಕ್ರಮಿಸಿ ನುಗ್ಗಿ ಯುವಕ ಹಾಗೂ ಗೆಳತಿಯ ಅರೆನಗ್ನ ವೀಡಿಯೋ ಹಾಗೂ ಫೊಟೋ ಚಿತ್ರೀಕರಿಸಿ ಬೆದರಿಕೆಯೊಡ್ಡಿ ಹಣ ಹಾಗೂ ಮೊಬೈಲ್ ಫೋನ್ ಅಪಹರಿಸಿದ ಪ್ರಕರಣದಲ್ಲಿ ಇನ್ನೋರ್ವನನ್ನು ಸೆರೆ ಹಿಡಿಯಲಾಗಿದೆ.
ಬಡಾಜೆ ಕಾಜೂರ್ ಮಾಲಿ ನಿವಾಸಿ ಟಿ.ಕೆ. ಮೊಹಮ್ಮದ್ ಫೈಸಲ್ (42)ನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದ್ದು, 2 ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾದ ಮಂಜೇಶ್ವರ ಪಿರಾರಮೂಲೆ ನಿವಾಸಿ ಹಾಗೂ ಕಡಂಬಾರ್ನಲ್ಲಿ ವಾಸವಾಗಿರುವ ಕೆ.ಎ. ಹಾರಿಸ್ (40)ನನ್ನು ಈ ಮೊದಲು ಬಂಧಿಸಲಾಗಿದೆ.
ಜನವರಿ ೧೪ರಂದು ಮಧ್ಯಾಹ್ನ 12 ಗಂಟೆಗೆ ಪ್ರಕರಣಕ್ಕೆ ಆಸ್ಪದವಾದ ಘಟನೆ ಸಂಭವಿಸಿತ್ತು. ಉಳ್ಳಾಲ ತಾಲೂಕಿನ ಮೋಂಟುಗೋಳಿಯ ಮೊಹಮ್ಮದ್ ಹನೀಫ್ (41), ಮುಡಿಪು ಬಳಿಯ ನಾಟೆಕಲ್ಲು ನಿವಾಸಿ ಇಸ್ರತ್ (30) ಎಂಬಿವರಿಗೆ ಆಕ್ರಮಣ ನಡೆಸಲಾಗಿತ್ತು. ಇವರು ಉಳಕೊಂಡಿದ್ದ ಕೊಠಡಿಗೆ ಅತಿಕ್ರಮಿಸಿ ನುಗ್ಗಿದ ನಾಲ್ಕು ಮಂದಿಯ ತಂಡ ಇವರಿಬ್ಬರನ್ನು ಮಂಚದಲ್ಲಿ ಜೊತೆಗಿರಿಸಿ ಅರೆನಗ್ನ ವೀಡಿಯೋ ಹಾಗೂ ಭಾವಚಿತ್ರಗಳನ್ನು ಚಿತ್ರೀ ಕರಿಸಿ ೨ ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿದ್ದು, ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯಗಳನ್ನು ಪ್ರಕಟಿಸುವುದಾಗಿ ಬೆದರಿಸಿತ್ತೆಂದು ದೂರಲಾಗಿತ್ತು. ದೂರುದಾರನ ಬಳಿಯಿಂದ 5,೦೦೦ ರೂ. ಹಾಗೂ ಮೊಬೈಲ್ ಅಪಹರಿಸಿರುವುದಾಗಿಯೂ ದೂರಲಾಗಿತ್ತು. ಈ ಪ್ರಕರಣದಲ್ಲಿ ಇನ್ನಿಬ್ಬರು ಸೆರೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.







