ಉಪ್ಪಳ: ಮಣ್ಣಂಗುಳಿ ಮೈದಾನ ಸಮೀಪದ ಅಂಗನವಾಡಿಗೆ ನುಗ್ಗಿ ಹಲವಾರು ಸಾಮಗ್ರಿಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ದೂರು ಲಭಿಸಿದ 24 ಗಂಟೆಗಳೊಳಗೆ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕರ್ನಾಟಕ ನೆಲ್ಯಾಡಿ ಕೊಕ್ಕಡ ನಿವಾಸಿ, ಪ್ರಸ್ತುತ ಮಣ್ಣಂಗುಳಿ ಪರಿಸರದಲ್ಲಿ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸವಾಗಿರುವ ಅಶ್ರಫ್ (55)ನನ್ನು ನಿನ್ನೆ ಸಂಜೆ ಉಪ್ಪಳದಿಂದ ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಈತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಈತನ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ೩ ಹಾಗೂ ಕುಂಬಳೆ ಠಾಣೆಯಲ್ಲಿ ಒಂದು ಕಳವುಕೇಸು ದಾಖಲಾಗಿದೆ. 2025 ಮೇ ತಿಂಗಳಲ್ಲಿ ಹೊಸಂಗಡಿಯ ಔಷಧಾಲಯವೊಂ ದರಿಂದ ಹತ್ತು ಸಾವಿರ ರೂ. ಕಳವುಗೈದ ಪ್ರಕರಣ ಸಹಿತ ಇತರ ಎರಡು ಕಳವು ಕೇಸುಗಳು ಈತನ ಹೆಸರಲ್ಲಿ ದಾಖಲಾಗಿದೆ. 2025ರಲ್ಲಿ ಕಳವು ನಡೆಸಿದ ಬಗ್ಗೆ ಕುಂಬಳೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಈತ ನಿರಂತರ ವಾಸಸ್ಥಳವನ್ನು ಬದಲಿಸುತ್ತಲೇ ಇರುವುದಾಗಿ ಪೊಲೀಸರು ತಿಳಿಸಿದ್ದು ಈ ಮೊದಲು ಅಲ್ಪ ಕಾಲ ಹೊಸಂಗಡಿ ಪರಿಸರದಲ್ಲಿ ವಾಸವಾಗಿದ್ದನು. ಇತ್ತೀಚೆಗೆ ಮಣ್ಣಂಗುಳಿಗೆ ಸ್ಥಳಾಂತರಗೊಂಡಿದ್ದನು. ಈ ತಿಂಗಳ 3ರಂದು ರಾತ್ರಿ ಅಂಗನ ವಾಡಿಯಿಂದ ಕಳವು ನಡೆಸಲಾಗಿದ್ದು, ೪ರಂದು ಬೆಳಿಗ್ಗೆ ಸಹಾಯಕಿ ಅಂಗನವಾಡಿಗೆ ತಲುಪಿದಾಗ ಕಳವುಗೈದ ಬಗ್ಗೆ ತಿಳಿದುಬಂದಿತ್ತು. ಬಳಿಕ ನೀಡಿದ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದರು. ಪರಿಸರದ ಸಿಸಿ ಟಿವಿ ದೃಶ್ಯಗಳನ್ನೆಲ್ಲಾ ಪರಿಶೀಲಿಸಲಾಗಿತ್ತು. ಶ್ವಾನದಳ, ಬೆರಳಚ್ಚು ತಂಡ ಕೂಡಾ ಸ್ಥಳಕ್ಕೆ ತಲುಪಿ ತನಿಖೆ ನಡೆಸಿತ್ತು. ವಿವಿಧ ಮೂಲಗಳಿಂದ ಲಭಿಸಿದ ಮಾಹಿತಿ ಪ್ರಕಾರ ಈತನ ಬಗ್ಗೆ ನಿಗಾ ಇರಿಸಿದ್ದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಸಿಐ ಪಿ. ಅಜಿತ್ ಕುಮಾರ್ ನಿರ್ದೇಶದಂತೆ ಎಸ್ಐಗಳಾದ ವೈಷ್ಣವ್, ಶಬರಿಕೃಷ್ಣ, ಉಮೇಶ್, ಮಹಿಳಾ ಪೊಲೀಸ್ ಸೋನಿಯಾ ಕಾರ್ಯಾ ಚರಣೆಗೆ ನೇತೃತ್ವ ನೀಡಿದ್ದು, ನಿನ್ನೆ ಸೆರೆಹಿಡಿದಿದ್ದಾರೆ.
ಈತ ಅಂಗನವಾಡಿಯಲ್ಲಿದ್ದ ಮೊಟ್ಟೆ ಉಪಯೋಗಿಸಿ ಆಮ್ಲೇಟ್ ಮಾಡಿ ತಿಂದಿರುವುದಾಗಿ ಪೊಲೀಸರು ತಿಳಿಸಿದ್ದು, ಕಳವುಗೈದ ಸಾಮಗ್ರಿಗಳನ್ನು ಓರ್ವನಿಗೆ ಮಾರಾಟಮಾಡಿದ ಬಗ್ಗೆಯೂ ತಿಳಿಸಿದ್ದಾನೆ. ಸಾಮಗ್ರಿಗಳನ್ನು ವಶಪಡಿಸಲಾಗಿದೆ. ಅಂಗನವಾಡಿಯಿಂದ ಮೂರು ಜಾರ್ ಒಳಗೊಂಡ ಮಿಕ್ಸಿ, ಎರಡು ಕುಕ್ಕರ್, ಒಂದು ಸೌಂಡ್ ಬಾಕ್ಸ್ ಹಾಗೂ ಇತರ ಪಾತ್ರೆಗಳನ್ನು ಕಳವುಗೈದಿದ್ದನು.






