ಸರಕಾರಿ ಕಚೇರಿಗಳಲ್ಲಿ ಕಂಪ್ಯೂಟರೀಕರಣ ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ ಆರು ತಿಂಗಳಿಂದ ಕಂಪ್ಯೂಟರ್‌ಗಳು ಸ್ತಬ್ದ

ಕುಂಬಳೆ: ಸರಕಾರಿ ಕಚೇರಿಗಳಲ್ಲಿ  ನಡೆಸಿರುವ ಕಂಪ್ಯೂಟರೀಕರಣ ಕೆಲವೆಡೆ  ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.  ಇದರಿಂದ  ಹಲವು ಅಗತ್ಯಗಳಿಗೆ ಕಚೇರಿಗಳಿಗೆ ತಲುಪುವವರು  ಸಂದಿಗ್ಧತೆ ಎದುರಿಸುತ್ತಿ ದ್ದಾರೆ.  ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ  ಇಂತಹ ಸಮಸ್ಯೆ ಎದುರಾಗಿರುವುದಾಗಿ ದೂರಲಾಗಿದೆ.  ಇಲ್ಲಿನ ಕಂಪ್ಯೂಟರ್‌ಗಳು, ಪ್ರಿಂಟರ್ ಕಾರ್ಯಾಚರಿಸದೆ ಆರು ತಿಂಗಳಿಂದ ಸ್ಥಬ್ದಗೊಂಡಿದೆ. ಇಲ್ಲಿ ನಾಲ್ಕು ಕಂಪ್ಯೂಟರ್ ಗಳಿದ್ದು ಅವುಗಳು ಪದೇ ಪದೇ ಸ್ಥಬ್ದಗೊಳ್ಳುತ್ತಿರುವುದು   ಸಮಸ್ಯೆಯಾಗಿ ಪರಿಣಮಿಸಿದೆ. ಕಂಪ್ಯೂಟರ್ ಸ್ತಬ್ದಗೊಂಡಾಗ ನೌಕರರು ಅದನ್ನು ಪದೇ ಪದೇ  ಬಡಿದು ಸರಿಪಡಿಸುತ್ತಿರುವುದು ನಿತ್ಯ ಘಟನೆಯಾಗಿದೆ.  ಕಂಪ್ಯೂಟರ್ ಕಾರ್ಯಾಚರಿಸದಿರುವುದು ಕಚೇರಿಯ ನೌಕರರಿಗೆ ತಲೆನೋವಾಗಿ ಪರಿಣಮಿಸುತ್ತಿರುವಾಗ  ನಾಗರಿಕರಿಗೂ ತಮ್ಮ ಅಗತ್ಯಗಳನ್ನು ನೆರವೇರಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.  ಮಕ್ಕಳ ಶಿಕ್ಷಣ ಸಂಬಂಧ ಅಗತ್ಯಗಳು, ತೆರಿಗೆ ರಶೀದಿ, ಜಾತಿ ಪ್ರಮಾಣಪತ್ರ ಸಹಿತ ವಿವಿಧ ಅಗತ್ಯಗಳಿಗೆ ಜನರು ಗ್ರಾಮ ಕಚೇರಿಗೆ ತಲುಪಿದಾಗ ಅಲ್ಲಿನ  ಕಂಪ್ಯೂಟರ್‌ಗಳು  ಕಾರ್ಯಾಚರಿಸದೆ ಜನರಿಗೆ ಬೇಕಾದ  ಪ್ರಮಾಣಪತ್ರಗಳು  ಲಭಿಸುತ್ತಿಲ್ಲ. ಇದು ಭಾರೀ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.  ಕಂಪ್ಯೂಟರ್‌ಗಳು ಕಾರ್ಯಾಚರಿಸದಿರುವುದನ್ನು   ಮೇಲಧಿಕಾರಿಗಳಿಗೆ  ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ನೌಕರರು ತಿಳಿಸುತ್ತಿದ್ದಾರೆ. ಎಡರಂಗ ಸರಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಸರಿಯಾಗಲಿದೆಯೆಂದು ಮುಖ್ಯಮಂತ್ರಿ ತಿಳಿಸಿದ್ದರು. ಆದರೆ ಸರಕಾರಿ ಕಚೇರಿಗಳಲ್ಲಿ ಈ ರೀತಿ  ಕಂಪ್ಯೂಟರ್ ಸಹಿತ ಉಪಕರಣಗಳು ಕಾರ್ಯಾಚರಿಸದೆ ಜನರಿಗೆ ಲಭಿಸಬೇಕಾದ ಸೌಲಭ್ಯಗಳು ಲಭಿಸದಿರಲು ಕಾರಣವೇನೆಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

You cannot copy contents of this page