ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರ ಪತ್ತೆ; ಯುವತಿ, ಗೃಹಿಣಿ ನಾಪತ್ತೆ

ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆ ಇಬ್ಬರು ಹೆಣ್ಣುಮಕ್ಕಳ ಸಹಿತ ನಾಲ್ಕು ಮಹಿಳೆಯರು ನಾಪತ್ತೆಯಾಗಿರುವುದಾಗಿ ದೂರಲಾಗಿದ್ದು, ಇವರಲ್ಲಿ 16 ವರ್ಷ ಪ್ರಾಯದ ಇಬ್ಬರು ಹೆಣ್ಮಕ್ಕಳನ್ನು ಪತ್ತೆಹಚ್ಚಲಾಗಿದೆ. ಅಡ್ಕತ್ತಬೈಲು, ಉದುಮ, ಪಾಕ್ಯಾರ ನಿವಾಸಿಗಳನ್ನು ಬೇಕಲ, ಕಾಸರ ಗೋಡು ನಗರ ಠಾಣೆ ಪೊಲೀಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಎರಡು ಘಟನೆಗಳಲ್ಲಿ ಪೊಲೀಸರು ಕೇಸು ದಾಖಲಿಸಿದ್ದರು.

ಸಣ್ಣ ವಿಷಯಕ್ಕೆ ಸಂಬಂಧಿಸಿ ಈ ಇಬ್ಬರು ಹೆಣ್ಮಕ್ಕಳು ಮನೆ ತೊರೆದು ತೆರಳಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೂಡ್ಲು ಪಾಯಿಚ್ಚಾಲ್‌ನಿಂದ ನಾಪತ್ತೆಯಾದ 18ರ ಹರೆಯದ ಯುವತಿಯನ್ನು ಪತ್ತೆಹಚ್ಚಲಾಗ ಲಿಲ್ಲ. ಶರಣ್ಯ ಎಂಬ ಯುವತಿ ನಾಪತ್ತೆಯಾದವಳು. ನಿನ್ನೆ ಸಂಜೆ 6.30ರ ವೇಳೆ ಕಾಸರಗೋಡಿನ ಕೆಲಸದ ಸ್ಥಳದಿಂದ ಮನೆಗೆಂದು ಹೊರಟಿದ್ದಳು. ಆದರೆ ಮನೆಗೆ ತಲುಪಬೇಕಾದ ಸಮಯ ದಾಟಿದರೂ ಶರಣ್ಯ ತಲುಪದ ಹಿನ್ನೆಲೆಯಲ್ಲಿ ತಾಯಿ ನೀಡಿದ ದೂರಿನಂತೆ ಟೌನ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಶರಣ್ಯ ಮಜಲ್ ನಿವಾಸಿಯಾದ ಅಮೃತ್ ಎಂಬ ವ್ಯಕ್ತಿಯ ಜೊತೆ ತೆರಳಿದ್ದಾಳೆಂದು ಶಂಕಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಕಳ್ಳಾರ್ ವೀಟಿಕ್ಕೋಲ್‌ನ ಸಿ. ನಾಣು ಎಂಬವರ ಪತ್ನಿ ಅಂಬಿಕ (38) ನಾಪತ್ತೆಯಾದ ಬಗ್ಗೆ ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ಆದಿತ್ಯ ವಾರ ಬೆಳಿಗ್ಗೆ ಮನೆಯಿಂದ ಪತ್ನಿ ಹೊರಟಿರುವುದಾಗಿ ನಾಣು ರಾಜಪುರಂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪನತ್ತಡಿಯಲ್ಲಿರುವ ನಾಣುರವರ ಸಹೋದರಿಯ ಮನೆಗೆ ತೆರಳುತ್ತಿರುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರು. ಆದರೆ ಆ ಬಳಿಕ ಹಿಂತಿರುಗಲಿಲ್ಲವೆಂದು ದೂರಿನಲ್ಲಿ ತಿಳಿಸಿದ್ದಾರೆ.

You cannot copy contents of this page