ಕುಂಬಳೆ: ತೃಶೂರಿನಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾದ ಮೂವರು ರೌಡಿಗಳನ್ನು ಕುಂಬಳೆಯ ಮನೆಯೊಂದರ ಟೆರೆಸ್‌ನ ಮೇಲಿನಿಂದ ಕುಂಬಳೆ ಹಾಗೂ ತೃಶೂರು ಪೊಲೀಸರು ನಡೆಸಿದ ಸಂಯುಕ್ತ ಕಾರ್ಯಾಚರಣೆಯಲ್ಲಿ ಅತೀ ಸಾಹಸಿಕ ರೀತಿಯಲ್ಲಿ ಸೆರೆಹಿಡಿಯಲಾಗಿದೆ.
ತೃಶೂರು ಕರಿಕ್ಕುಳಿ ಅಶೇರಿ ಕಯಟ್ಟಂ ಪಣಿಗ ಎಂಬಲ್ಲಿನ ಡುಡು ಯಾನೆ ಇಜಾಸ್ (27), ಕರುವನ್ನೂರು ನೆಡುಂಬೂರಕ್ಕಲ್ ನಿವಾಸಿ ನಿಯಾಸ್ (31), ಪೊರತ್ತಿಶ್ಶೇರಿ ಪುರಾಯಾಟ್ಟು ಪರಂಬಿಲ್ ನಿವಾಸಿ ಗೋಕುಲ್‌ಕೃಷ್ಣ (27) ಎಂಬಿವರನ್ನು ಸೆರೆಹಿಡಿಯಲಾಗಿದೆ. ಕೊಟೇಶನ್, ಕಾಪಾ, ಮಾದಕವಸ್ತು, ಹತ್ಯೆಯತ್ನ ಸಹಿತ ಹಲವು ಪ್ರಕರಣಗಳಲ್ಲಿ ಈ ಆರೋಪಿಗಳು ಶಾಮೀಲಾಗಿದ್ದಾ ರೆಂದು ಪೊಲೀಸರು ತಿಳಿಸಿದ್ದಾರೆ. ಹಲವು ಪ್ರಕರಣಗಳಿಗೆ ಸಂಬಂಧಿಸಿ ತೃಶೂರು ಪೊಲೀಸರು ಇವರಿಗಾಗಿ ಶೋಧ ನಡೆಸುತ್ತಿದ್ದ ವೇಳೆ ಕುಂಬಳೆಯಲ್ಲಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಆಧಾರದಲ್ಲಿ ತೃಶೂರು ರೂರಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಕೃಷ್ಣ ಕುಮಾರ್ ನೇತೃತ್ವದ ಪೊಲೀಸ್ ತಂಡ ಕುಂಬಳೆ ಪೊಲೀಸರನ್ನು ಸಂಪರ್ಕಿಸಿದ್ದರು. ಬಳಿಕ ಎಸ್‌ಐ ಅಬ್ದುಲ್ ಸಲಾಂ ನೇತೃತ್ವದ ತಂಡ ಇವರೊಂದಿಗೆ ಸೇರಿ ನಡೆಸಿದ ಸಾಹಸಿಕ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಸೆರೆಹಿಡಿಯಲು ಸಾಧ್ಯವಾಗಿದೆ.
ಕುಂಬಳೆ ಕುಂಟಂಗೇರಡ್ಕದ ಜೋಮೋನ್ ಎಂಬವರ ಮನೆಯ ಟೆರೇಸ್‌ನ ಮೇಲೆ ಆರೋಪಿಗಳು ತಲೆಮರೆಸಿಕೊಂಡು ವಾಸಿಸುತ್ತಿದ್ದರು. ಇವರನ್ನು ಸೆರೆಹಿಡಿಯಲು ಪೊಲೀಸರಿಗೆ ಭಾರೀ ಸಾಹಸವನ್ನೇ ನಡೆಸಬೇಕಾಗಿ ಬಂದಿದೆ. ಬಳಿಕ ಸಮಗ್ರ ತನಿಖೆಗೊಳ ಪಡಿಸಿ ಆರೋಪಿಗಳನ್ನು ತೃಶೂರಿಗೆ ಕೊಂ ಡೊಯ್ಯಲಾಯಿತು. ತೃಶೂರು ಪೆರಿಂಞನಂ ನಿವಾಸಿ ಅನೀಸ್ (೨೩) ಎಂಬವರನ್ನು ಕಳೆದ ಫೆ. ೧೭ರಂದು ರಾತ್ರಿ ಮನೆಗೆ ನುಗ್ಗಿ ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಪ್ರಕರಣದಲ್ಲಿ ಈ ಮೂವರು ಆರೋಪಿ ಗಳಾಗಿದ್ದಾರೆ. ಹಣಕಾಸು ಸಂಬಂಧ ವಿವಾದದ ಹಿನ್ನೆಲೆಯಲ್ಲಿ ಮನೆಗೆ ಅತಿಕ್ರಮಿಸಿ ನುಗ್ಗಿದ ಆರೋಪಿಗಳು ಅನೀಸ್‌ರಿಗೆ ಕಬ್ಬಿಣದ ಸರಳು ಮೊದಲಾದ ಮಾರಕಾಯುಧಗಳಿಂದ ಹಲ್ಲೆಗೈದು ತಲೆ, ಕೈಕಾಲುಗಳಿಗೆ ಗಂಭೀರ ಗಾಯಗೊಳಿಸಿದ್ದರು. ಹಲ್ಲೆಯನ್ನು ತಡೆಯಲೆತ್ನಿಸಿದ ಸ್ನೇಹಿತ ಕೃಷ್ಣ ತೇಜಸ್ (22) ಎಂಬವರ ಮೇಲೂ ತಂಡ ಹಲ್ಲೆಗೈದಿತ್ತು. ಈ ಘಟನೆ ಬಳಿಕ ತೃಶೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ತಲೆಮರೆಸಿ ಕೊಂಡಿದ್ದ ತಂಡಕ್ಕಾಗಿ ಪೊಲೀಸರು ಶೋಧ ಆರಂಭಿಸಿದ್ದರು. ಪೊಲೀಸರು ತಮ್ಮನ್ನು ಹಿಂಬಾಲಿಸುತ್ತಿದ್ದಾರೆಂದು ತಿಳಿದ ಆರೋಪಿಗಳು ಅಲ್ಲಿಂದ ಕಾಸರ ಗೋಡಿಗೆ ಪಲಾಯನಗೈದಿದ್ದರು. ಇವರಿಗೆ ತಲೆಮರೆಸಿಕೊಂಡು ಜೀವಿಸಲು ಸೌಕರ್ಯ ಕಲ್ಪಿಸಿಕೊಟ್ಟವರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೆರೆಗೀಡಾದ ಇಜಾಸ್ ಮಣ್ಣುತ್ತಿ ಎಂಬಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದನು. ಕಾಪಾ ಕಾಯ್ದೆ ಪ್ರಕಾರದ ಕ್ರಮಗಳನ್ನು ಈತನ ವಿರುದ್ಧ ಕೈಗೊಳ್ಳಲಾಗಿದೆ. ಇದರ ಹೊರತು ಮದಿಲಗಂ, ಕೈಪಮಂಗಲ, ವಡಕ್ಕೇಕ್ಕಾಡ್, ವಲಪ್ಪಾಡ್, ಮಣ್ಣುತ್ತಿ ಎಂಬೀ ಪೊಲೀಸ್ ಠಾಣೆಗಳಲ್ಲಾಗಿ ಆರು ಹತ್ಯೆಯತ್ನ ಪ್ರಕರಣಗಳೂ ಈ ಮೂವರು ಆರೋಪಿಗಳ ಮೇಲೆ ದಾಖಲಾಗಿದೆ. ಇದರ ಹೊರತು ಒಂದು ಕಳವು ಪ್ರಕರಣ, ಮೂರು ಘರ್ಷಣೆ ಸಹಿತ 18 ಕ್ರಿಮಿನಲ್ ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಸೆರೆಗೀಡಾದ ನಿಯಾಸ್ ಇರಿಞ್ಞಾಲಕುಡ, ಚೇರ್ಪು ಪೊಲೀಸ್ ಠಾಣೆಗಳಲ್ಲಿ ಮೂರು ಹತ್ಯೆಯತ್ನ ಪ್ರಕರಣಗಳು, ಮಾದಕವಸ್ತುವಿಗೆ ಸಂಬಂಧಪಟ್ಟ ಎರಡು ಪ್ರಕರಣಗಳ ಸಹಿತ ೭ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತನನ್ನು ಕಾಪಾ ಕಾಯ್ದೆ ಪ್ರಕಾರ ಗಡಿಪಾರು ಮಾಡಲಾಗಿತ್ತು. ಸೆರೆಗೀಡಾದ ಮೂರನೇ ಆರೋಪಿ ಗೋಕುಲ್‌ಕೃಷ್ಣ ಇರಿಞ್ಞಾಲಕುಡ, ಚೇರ್ಪು ಪೊಲೀಸ್ ಠಾಣೆಗಳಲ್ಲಾಗಿ ಎರಡು ಹತ್ಯೆಯತ್ನ ಪ್ರಕರಣಗಳು, ಮಾದಕವಸ್ತು ಪ್ರಕರಣಗಳ ಸಹಿತ ನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಕರುವನ್ನೂರು ಪೊರತ್ತಿಶ್ಶೇರಿ ನಿವಾಸಿಗಳಾದ ನೆಡುಂಪುರೈಕಲ್ ಶಮೀರ್ (40), ಮುರುಙತ್ತ್ ಸುಧಿನ್ (29) ಎಂಬಿವರು ಈ ಹಿಂದೆ ಸೆರೆಗೀಡಾಗಿದ್ದರು. ಇವರು ಪ್ರಸ್ತುತ ರಿಮಾಂಡ್‌ನಲ್ಲಿದ್ದಾರೆ. ತೃಶೂರು ರೂರಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಕೃಷ್ಣ ಕುಮಾರ್, ಡಾನ್ಸಾಪ್ ತಂಡದ ಸದಸ್ಯರಾದ ಜಿಎಸ್‌ಐ ಪ್ರದೀಪ್ ಸಿ.ಆರ್, ಜಿಎಎಸ್‌ಐ ಲಿಜು ಇಯಾನಿ, ಜಿಎಸ್‌ಸಿಪಿಒ ಬಿಜು ಸಿ.ಕೆ, ಸಿಪಿಒ ಸೂರ್ಜಿತ್ ಸಾಗರ್, ಕೈಪಮಂಗಲ ಪೊಲೀಸ್ ಠಾಣೆಯ ಸುನಿಲ್ ಕುಮಾರ್, ಡೆನ್ಸ್ ಮೋನ್ ಎಂಬಿವರು ಆರೋಪಿಗಳನ್ನು ಸೆರೆಹಿಡಿದ ತೃಶೂರು ಪೊಲೀಸ್ ತಂಡದಲ್ಲಿದ್ದರು. ಕುಂಬಳೆ ಎಸ್‌ಐ ಅಬ್ದುಲ್ ಸಲಾಂ ಹಾಗೂ ತಂಡ ಆರೋಪಿಗಳನ್ನು ಸೆರೆಹಿಡಿಯಲು ತೃಶೂರು ಪೊಲೀಸರಿಗೆ ಸಹಾಯವೊದಗಿಸಿದ್ದಾರೆ.






