ಕಾಸರಗೋಡು: ನೆರೆಮನೆಯ ಚಿನ್ನ ಕಳವಿಗೀಡಾದ ಬಗ್ಗೆ ಲಭಿಸಿದ ದೂರಿಗೆ ಸಂಬಂಧಿಸಿ ಪೊಲೀಸರು ವಿಚಾರಣೆಗೊಳಪಡಿಸಿದ ಯುವತಿ ವಿಷಪ್ರಾಶನಗೈದು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಆಕೆಯ ಸಹೋದರನ ಹೇಳಿಕೆಯನ್ನು ವಿದ್ಯಾನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೆ ಆಕೆಯ ಹೆತ್ತವರು ಹಾಗೂ ಇತರರ ಹೇಳಿಕೆಯನ್ನು ದಾಖಲಿಸ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಆಲಂಪಾಡಿ ನಾಲತ್ತಡ್ಕದ ನಬೀಸತ್ ಜಸೀಲ (24) ಫೆ. 15ರಂದು ವಿಷ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಆಕೆಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಆಕೆಯ ಮನೆಯವರು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆಕೆಯ ಮನೆಯವರ ಹೇಳಿಕೆಯನ್ನು ದಾಖಲಿಸಿಕೊಳ್ಳತೊಡಗಿದ್ದಾರೆ. ಇದರಂತೆ ಜಸೀಲಳ ಸಹೋದರನ ಹೇಳಿಕೆಯನ್ನು ಪೊಲೀಸರು ಈಗಾಗಲೇ ದಾಖಲಿಸಿಕೊಂಡಿದ್ದಾರೆ.ಮೃತ ಜಸೀಲಳ ಬೋವಿಕ್ಕಾನ ಬಳಿಯ ಪೊವ್ವಲ್ನಲ್ಲಿರುವ ಪತಿ ಮನೆಯ ನೆರೆಮನೆಯೊಂದರಿಂದ 9 ಪವನ್ ಚಿನ್ನಾಭರಣಗಳು ನಾಪತ್ತೆಯಾಗಿತ್ತು. ಆ ಬಗ್ಗೆ ಮನೆಯವರು ಆದೂರು ಪೊಲೀಸರಿಗೆ ದೂರು ನೀಡಿದ್ದರು. ಅದಕ್ಕೆ ಸಂಬಂಧಿಸಿ ಪೊಲೀಸರು ಜಸೀಲರನ್ನು ವಿಚಾರಣೆಗೊಳಪಡಿಸಿ ದ್ದರು. ಇದಾದ ಬಳಿಕ ದೂರು ನೀಡಿದ ವ್ಯಕ್ತಿ ಮತ್ತು ಆಕೆಯ ಪತಿ ಮನೆಯವರು ನಾಲತ್ತಡ್ಕದಲ್ಲಿರುವ ಜಸೀಲರ ತವರು ಮನೆಗೆ ಬಂದು ಚಿನ್ನ ಕಳವು ವಿಷಯದ ಬಗ್ಗೆ ಪ್ರಶ್ನಿಸಿದ್ದರು. ಅದು ಭಾರೀ ವಾಗ್ವಾದಕ್ಕೂ ದಾರಿ ಮಾಡಿಕೊಟ್ಟಿತು.
ಅದರ ಬೆನ್ನಲ್ಲೇ ಜಸೀಲ ವಿಷಪ್ರಾಶನಗೈದಿದ್ದರು. ವಿಷಪ್ರಾಶನಗೈಯ್ಯುವ ಮೊದಲು ಜಸೀಲ ತಾನು ಮಾನಸಿಕವಾಗಿ ತೀವ್ರ ಒತ್ತಡದಲ್ಲಿದ್ದೇನೆಂದೂ ಮಾತ್ರವಲ್ಲದೆ ನಾನು ಯಾವುದೇ ಚಿನ್ನ ಕಳವುಗೈದಿಲ್ಲವೆಂದು ವೀಡಿಯೋ ಕಾಲ್ ಮಾಡಿದ್ದರು. ವಿಷ ಸೇವಿಸಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ವೇಳೆ ಮೆಜಿಸ್ಟ್ರೇಟರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.
ನಾಲತ್ತಡ್ಕದ ಜಲೀಲ್-ಮುಮ್ತಾಸ್ ದಂಪತಿ ಪುತ್ರಿಯಾಗಿರುವ ಜಸೀಲ ಪತಿ ಅಮೀರ್,ಮಕ್ಕಳಾದ ಐಸಾನ್, ಮಹ್ಶೂಕ್, ಸಹೋದರ ಅನಸ್, ಸಹೋದರಿ ಜಸೀರ ಮೊದಲಾದವರನ್ನು ಅಗಲಿದ್ದಾರೆ.






