ಪಾವೂರಿನಿಂದ ಮಧ್ಯವಯಸ್ಕನನ್ನು ಅಪಹರಣಗೈದ ನಾಲ್ಕು ಮಂದಿ ಬಂಧನ: ಎರಡು ಕಾರು ವಶ; ಇತರ ಆರೋಪಿಗಳಿಗಾಗಿ ಶೋಧ; ಅಪಹರಣಕ್ಕೀಡಾದ ವ್ಯಕ್ತಿ ಸುರಕ್ಷಿತ

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪಾವೂರಿನಿಂದ  ಅಪಹರಣಕ್ಕೀಡಾದ ಮಧ್ಯ ವಯಸ್ಕನನ್ನು ಪೊಲೀಸರು ಅತೀ ಸಾಹಸಿಕವಾಗಿ  ರಕ್ಷಿಸಿದ್ದಾರೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಅಜಿತ್ ಕುಮಾರ್ ನೇತೃತ್ವದಲ್ಲಿ ಸೆರೆಹಿಡಿಯ ಲಾಗಿದೆ. ಅಪಹರಣಕ್ಕಾಗಿ ಬಳಸಿದ ಎರಡು ಕಾರುಗಳನ್ನು ಕಸ್ಟಡಿಗೆ ತೆಗೆಯಲಾಗಿದೆ.

ಮಂಜೇಶ್ವರ ಪಾವೂರು ನಿವಾಸಿಗಳಾದ ಅಬ್ದುಲ್ ಗಫೂರ್ (25), ಅಬ್ದುಲ್ ಅನಸ್ (27), ಮುಹಮ್ಮದ್ ಶಿಹಾಬ್ (40), ಮುಹಮ್ಮದ್ ರಫೀಕ್ (40) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಪಾವೂರು ಕೊಂಬಂಕುಳಿಯ ಸಾಮಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಅಬ್ದುಲ್ ರಹ್ಮಾನ್‌ರನ್ನು ಶುಕ್ರವಾರ ರಾತ್ರಿ ೧೦.೪೫ರ ವೇಳೆ ಪೊಲೀಸ್ ಸಮವಸ್ತ್ರ ಧರಿಸಿ ತಲುಪಿದವರು ಹಾಗೂ ಓರ್ವೆ ಮಹಿಳೆ ಒಳಗೊಂಡ ತಂಡ ಅಪಹರಿಸಿ ಕೊಂಡೊಯ್ದಿತ್ತು. ಮನೆಗೆ ಅತಿಕ್ರಮಿಸಿ ನುಗ್ಗಿದ ತಂಡ ಬಲಪ್ರಯೋಗಿಸಿ ಅಬ್ದುಲ್ ರಹ್ಮಾನ್‌ರನ್ನು ಅಪಹರಣಗೈದಿರುವುದಾಗಿ ಪತ್ನಿ ತಾಹಿರ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಇದರಂತೆ ಗಫೂರ್, ಸಬೀನ ಹಾಗೂ ಕಂಡರೆ ಪತ್ತಹಚ್ಚಬಹುದಾದ ಇತರ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದರು.  ಈ ವೇಳೆ ನಾಲ್ಕು ಮಂದಿಯನ್ನು ಸೆರೆಹಿಡಿಯಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.

ಈ ಅಪಹರಣ ಪ್ರಕರಣದ ಹಿಂದೆ ಒಂದು ಕೋಟಿ ರೂಪಾಯಿಗಳ ವ್ಯವಹಾರವಿದ್ದುದಾಗಿ  ಪೊಲೀಸರು ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆ ಪ್ರಕರಣಕ್ಕೆ ಕಾರಣವಾದ ಘಟನೆ ಆರಂಭಗೊಂಡಿತ್ತು. ಅಬ್ದುಲ್ ರಹ್ಮಾನ್‌ರ ಪುತ್ರ ಸಾಮಿಯ ಸೆರೆಗೀಡಾದ ಅಬ್ದುಲ್ ಗಫೂರ್‌ನಿಂದ ಚಿನ್ನ ಸಹಿತ  ಒಂದು ಕೋಟಿ ರೂಪಾಯಿ ಪಡೆದು ಕೊಂಡಿರುವುದಾಗಿ ಹೇಳಲಾಗುತ್ತಿದೆ. ಅಪರಿಮಿತ ಬಡ್ಡಿ ನೀಡುವ ಭರವಸೆಯೊಡ್ಡಿ ಹಣ ಪಡೆದುಕೊಂಡಿದ್ದರು. ಆದರೆ ಈ ಹಣ ಅಥವಾ ಬಡ್ಡಿಯನ್ನು  ಮರಳಿ ನೀಡದುದರಿಂದ ಅಬ್ದುಲ್ ಗಫೂರ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಸಿವಿಲ್ ದೂರು ಆಗಿರುವುದರಿಂದ ನ್ಯಾಯಾಲಯವನ್ನು ಸಮೀಪಿಸಲು ತಿಳಿಸಿದ ಪೊಲೀಸರು ಕೇಸು ದಾಖಲಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಹಣವನ್ನು ಮರಳಿ ವಸೂಲಿ ಮಾಡಲು ತಂಡ ಅಬ್ದುಲ್ ರಹ್ಮಾನ್‌ರನ್ನು ಅಪಹರಣಗೈದಿರುವುದಾಗಿ   ತನಿಖೆಯಲ್ಲಿ ತಿಳಿದುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಹಣ ಪಡೆದು ನೀಡದೆ ವಂಚಿಸಿದ ಸಂಬಂಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಲು ಸಿದ್ಧವಾಗದ ಹಿನ್ನೆಲೆಯಲ್ಲಿ ಸಾಮಿಯರ ತಂದೆ ವಿರುದ್ಧ ರಾಜಸ್ಥಾನ ಪೊಲೀಸರಿಗೆ ದೂರು ನೀಡಲಾಗಿತ್ತು. ರಾಜಸ್ಥಾನ ನಿವಾಸಿಯಾದ ಪೂನಂಚಂದ್ ಎಂಬಾತನ ದೂರಿನ ಪ್ರಕಾರ ಬೇವಾರ್ ಜಿಲ್ಲೆಯ ಜಯತಾರಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಒಂದು ಕೋಟಿ ರೂಪಾಯಿ ಲಪಟಾಯಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಬ್ಬರು ಪೊಲೀಸರು ವಿಮಾನ ಮೂಲಕ ಮಂಗಳೂರಿಗೆ ತಲುಪಿದ್ದರು. ಶುಕ್ರವಾರ ರಾತ್ರಿ ಇತರ ಆರೋಪಿಗಳನ್ನು ಸೇರಿಸಿ ಪೊಲೀಸ್ ತಂಡ ಎರಡು ಕಾರುಗಳಲ್ಲಾಗಿ ಪಾವೂರಿಗೆ ತಲುಪಿತ್ತು. ಬಳಿಕ ಮನೆಗೆ ಅತಿಕ್ರಮಿಸಿ ನುಗ್ಗಿ ಅಬ್ದುಲ್ ರಹ್ಮಾನ್‌ರನ್ನು ಕಾರಿನಲ್ಲಿ ಅಪಹರಣಗೈಯ್ಯಲಾಗಿತ್ತು. ಈ ಸಂಬಂಧ ದೂರು ಲಭಿಸಿದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ಪ್ರಾಥಮಿಕ ತನಿಖೆ ಆರಂಭಿಸಿತ್ತು. ಅಬ್ದುಲ್ ಗಫೂರ್ ಸಹಿತ ನಾಲ್ಕು ಮಂದಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು. ಪಾವೂರಿನಿಂದ ವಿವಿಧ ಪ್ರದೇಶಗಳಲ್ಲಿರುವ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.ಕಾರಿನ ನಂಬ್ರ ಲಭಿಸುವುದರೊಂದಿಗೆ ತನಿಖೆಯನ್ನು ಮಂಗಳೂರಿಗೆ ವಿಸ್ತರಿಸಲಾಗಿತ್ತು. ಅದರ ಬೆನ್ನಲ್ಲೇ ಆರೋಪಿಗಳು ತಂಗಿದ್ದ ಲಾಡ್ಜ್‌ನ್ನು ಪತ್ತೆಹಚ್ಚಲಾಗಿತ್ತು. ಲಾಡ್ಜ್‌ನಲ್ಲಿ ಹಣ ವ್ಯವಹಾರ ಸಂಬಂಧಿಸಿದ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಲು ಆರೋಪಿಗಳು  ಉದ್ದೇಶಿಸಿದ್ದರೆಂದು ಹೇಳಲಾಗುತ್ತಿದೆ. ಆದರೆ ಅಬ್ದುಲ್ ರಹ್ಮಾನ್ ಹಣ ನೀಡಲು ಸಾಧ್ಯವಿಲ್ಲ ವೆಂದು ತಿಳಿಸಿದ ಹಿನ್ನೆಲೆಯಲ್ಲಿ ತಂಡ ಅವರೊಂದಿಗೆ ಮಂಗಳೂರಿನಿಂದ ಬೇರೆಡೆಗೆ ತೆರಳಿತು. ಕಾರು  ಸಾಗುತ್ತಿರುವ ದಾರಿಯನ್ನು ಪತ್ತೆಹಚ್ಚಿದ ಪೊಲೀಸರು ಅದನ್ನು ಹಿಂಭಾಲಿಸಿದ್ದಾರೆ. ಸಕಲೇಶಪುರಕ್ಕೆ ತಲುಪಿದಾಗ ಕಾರನ್ನು ಪತ್ತೆಹಚ್ಚಿ ತಡೆದು ನಿಲ್ಲಿಸಲಾಯಿತು.

ಅಬ್ದುಲ್ ಗಫೂರ್, ಅಬ್ದುಲ್ ಅನಸ್ ಹಾಗೂ ಅಪಹರಣಕ್ಕೀಡಾದ ಅಬ್ದುಲ್ ರಹ್ಮಾನ್ ಕಾರಿನಲ್ಲಿದ್ದರು. ಕಾರು ಸಹಿತ ಮೂರು ಮಂದಿಯನ್ನು ಪೊಲೀಸರು ಕೂಡಲೇ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇತರರನ್ನು ಪತ್ತೆಹಚ್ಚಲು ಎಸ್‌ಐ ವೈಷ್ಣವ್ ನೇತೃತ್ವದ ತಂಡ ಪ್ರಯಾಣ ಮುಂದುವರಿಸಿತು. ಶಿವಮೊಗ್ಗಕ್ಕೆ ತಲುಪಿದಾಗ ಮುಹಮ್ಮದ್ ಶಿಹಾಬ್ ಹಾಗೂ ಮುಹಮ್ಮದ್ ರಫೀಕ್ ಸಹಿತ ಇತರರು ಸಂಚರಿಸಿದ ಕಾರನ್ನು ವಶಕ್ಕೆ ತೆಗೆಯಲಾಯಿತು. ಬಂಧಿತರನ್ನು ಮಂಜೇಶ್ವರಕ್ಕೆ ತಲುಪಿಸಿ ಸಮಗ್ರ ತನಿಖೆ ನಡೆಸಲಾಗುತ್ತಿದೆ. ತನಿಖಾ ತಂಡದಲ್ಲಿ ಇನ್‌ಸ್ಪೆಕ್ಟರ್ ಪಿ.ಅಜಿತ್ ಕುಮಾರ್‌ರ ಹೊರತು ಎಸ್‌ಐಗಳಾದ ರತೀಶ್, ಎಎಸ್‌ಐ ಅಜಿತ್, ಚಾಲಕ ಸಂದೀಪ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ವಿಜಯನ್, ಸನೂಪ್ ಎಂಬಿವರು ಇದ್ದರು.

RELATED NEWS

You cannot copy contents of this page