ಅಡೂರು: ಗಾಳಿಮುಖ ಗೇರುಬೀಜ ಸಂತತಿ ತೋಟದಲ್ಲಿ ಹಸಿರು ಉಡುಗೆ ತೊಟ್ಟ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ನಾಗರಿಕರಿಗೆ ಸುವರ್ಣಾವಕಾಶ ಒದಗಿಸಲಾಗುತ್ತಿದೆ. ಸರಕಾರದ ಅಧೀನದಲ್ಲಿರುವ ಫಾರ್ಮ್ಗಳನ್ನು ಜನಪರಗೊಳಿಸಬೇಕೆಂಬ ಕೃಷಿ ಸಚಿವರ ನಿರ್ದೇಶ ಪ್ರಕಾರ ಈ ತಿಂಗಳ 28, ಮಾರ್ಚ್ 1, 2ರಂದು ವಿಪುಲವಾದ ಫಾರ್ಮ್ ಫೆಸ್ಟ್ ನಡೆಯಲಿದೆ. ಮೂರು ದಿನಗಳಲ್ಲಾಗಿ ನಡೆಯುವ ಈ ಕೃಷಿ ಪ್ರದರ್ಶನ ಮಾರಾಟಮೇಳ ಆದೂರು ಗಾಳಿಮುಖ ಪ್ರದೇಶಗಳಲ್ಲಾಗಿ ವ್ಯಾಪಿಸಿರುವ ಗೇರುತೋಟದ ಸೌಂದರ್ಯವನ್ನು ಸಾರ್ವಜನಿಕರಿಗೆ ಸಮೀಪದಿಂದ ಸವಿಯಲು ಅವಕಾಶ ಒದಗಿಸಲಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ ಉದ್ಘಾಟಿಸುವರು. ಕಾರಡ್ಕ ಪಂ. ಅಧ್ಯಕ್ಷೆ ಎಂ. ಜನನಿ ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ ೯ರಿಂದ ಸಂಜೆ 6 ಗಂಟೆವರೆಗೆ ಈ ದಿನಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶಿಸಬಹುದಾಗಿದೆ. ಗಾಳಿಮುಖದ ಉದಯಾಸ್ತಮಾನ ವಿಸ್ಮಯ ದೃಶ್ಯಗಳನ್ನು ನೋಡಲು ಸಾಧ್ಯವಾಗುವ ಮಾಯಿಲಾಂಕೋಟೆ ವ್ಯೂ ಪಾಯಿಂಟ್, ಅದಕ್ಕೆ ಸಂಬಂಧಿಸಿರುವ ಶೆಲ್ಟರನ್ನು ಫೆಸ್ಟ್ನಂಗವಾಗಿ ಉದ್ಘಾಟಿಸುವುದಾಗಿ ತಿಳಿದು ಬಂದಿದೆ. ಇಲ್ಲಿಂದ ಗುಣಮಟ್ಟವಿರುವ ಸಸಿಗಳನ್ನು, ನಾಟಿ ವಸ್ತುಗಳನ್ನು ನೇರವಾಗಿ ಖರೀದಿಸಲಿರುವ ಸೌಕರ್ಯ ಏರ್ಪಡಿಸಲಾಗಿದೆ.







