ಕುಂಬಳೆ: ಕಳೆದ ಮಳೆಗಾಲದಲ್ಲಿ ಕೋಟ್ಟಯಂನಲ್ಲಿ ಸರಕಾರಿ ಆಸ್ಪತ್ರೆ ಕಟ್ಟಡವೊಂದು ಕುಸಿದುಬಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೋಚನೀಯ ಸ್ಥಿತಿಯಲ್ಲಿರುವ ಹಲವು ಆರೋಗ್ಯ ಕೇಂದ್ರಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸಲಾಗಿತ್ತು. ಆದರೆ ಅವುಗಳನ್ನು ದುರಸ್ತಿಗೊಳಿಸಲು ಕ್ರಮ ಉಂಟಾಗಲಿಲ್ಲ. ಇದು ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಭಾರೀ ಸಮಸ್ಯೆ ಸೃಷ್ಟಿಸುತ್ತಿದೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಶೋಚನೀಯ ಸ್ಥಿತಿಯಲ್ಲಿದ್ದ ಕಟ್ಟಡಗಳನ್ನು ಮುಚ್ಚುಗಡೆಗೊಳಿಸ ಲಾಗಿತ್ತು. ಇದರಂತ ಕಾಸರಗೋಡು ಜಿಲ್ಲೆಯಲ್ಲೂ ಕೆಲವು ಕಟ್ಟಡಗಳಿಗೆ ಬೀಗ ಜಡಿಯಲಾಗಿದೆ. ಕುಂಬಳೆಯಲ್ಲಿ ಕಾರ್ಯಾಚರಿಸುತ್ತಿದ್ದ ಸರಕಾರಿ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ (ಬಿಎಫ್ಎಚ್ಸಿ) ಕಟ್ಟಡಕ್ಕೂ ಬೀಗ ಜಡಿಯಲಾಗಿತ್ತು. ಇಲ್ಲಿದ್ದ ಡ್ರೈಸ್ಸಿಂಗ್, ಇಂಜೆಕ್ಷನ್ ರೂಂ, ಫಾರ್ಮಸಿ ಮೊದಲಾದವುಗಳನ್ನು ಸ್ಥಳ ಸೌಕರ್ಯ ಅಭಾವವುಳ್ಳ ಇತರ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಇದು ರೋಗಿಗಳ ಸಮಸ್ಯೆಗೆ ಕಾರ ಣವಾಗಿದೆ. ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ತರಗತಿಗಳು ನಡೆಯುತ್ತಿದ್ದ ನಾಲ್ಕು ಕೊಠಡಿಗಳುಳ್ಳ ಎರಡು ಹಳೆಯ ಕಟ್ಟಡಗಳನ್ನು ಮುಚ್ಚುಗಡೆಗೊಳಿ ಸಲಾಗಿದೆ. ಆದರೆ ಇಲ್ಲಿ ಕೂಡಾ ಬದಲಿ ವ್ಯವಸ್ಥೆ ಏರ್ಪಡಿಸಲು ಅಥವಾ ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಿಲ್ಲ. ನಾಲ್ಕು ತರಗತಿಗಳ ಮಕ್ಕಳನ್ನು ಇತರ ತರಗತಿ ಕೊಠಡಿಗಳಲ್ಲಿ ಕುಳ್ಳಿರಿಸಿ ಈಗ ತರಗತಿ ನಡೆಸಲಾಗುತ್ತಿದೆ. ನೂತನ ಶೈಕ್ಷಣಿಕ ವರ್ಷ ಆರಂಭಗೊಳ್ಳುವುದರೊಂದಿಗೆ ಈ ತರಗತಿಗಳಿಗೆ ಹೊಸ ಕಟ್ಟಡ ನಿರ್ಮಿಸದಿದ್ದಲ್ಲಿ ಶಿಕ್ಷಣವನ್ನು ಬಾಧಿಸಲಿದೆಯೆಂದು ಪಿಟಿಎ ತಿಳಿಸಿದೆ.






