ಕಾಸರಗೋಡು: ವಿದ್ಯುತ್ ಚಾಲಿತ ಸ್ಕೂಟರ್ ಬೆಂಕಿಗಾಹುತಿ ಯಾಗಿ ಭಾರೀ ನಷ್ಟ ಉಂಟಾದ ಘಟನೆ ನಗರದ ಅಣಂಗೂರಿನಲ್ಲಿ ನಿನ್ನೆ ನಡೆದಿದೆ.
ಪರವನಡ್ಕ ನಿವಾಸಿ ಕೆ. ಸುರೇಶ್ ಎಂಬವರ ಸ್ಕೂಟರ್ ಬೆಂಕಿಗಾಹುತಿ ಯಾಗಿದೆ. ಸ್ಕೂಟರಿನ ಬ್ಯಾಟರಿ ಸರಿಯಾಗಿ ಕಾರ್ಯಾಚರಿಸದೇ ಇರುವುದರಿಂದಾಗಿ ಸುರೇಶ್ ನಿನ್ನೆ ಅಣಂಗೂರಿನ ಸರ್ವೀಸ್ ಸೆಂಟರೊಂದಕ್ಕೆ ದುರಸ್ತಿಗಾಗಿ ತಂದಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿ ಸ್ಕೂಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲೇ ಪಕ್ಕದ ಅಂಗಡಿಯೊಂದರ ಸಿಬ್ಬಂದಿಗಳು ತಕ್ಷಣ ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಪಿ.ಎನ್. ವೇಣುಗೋಪಾಲನ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿದೆ. ಬೆಂಕಿ ಅನಾಹುತದಿಂದ ಸ್ಕೂಟರ್ನ ಬ್ಯಾಟರಿ ಮತ್ತು ಸೀಟು ಪೂರ್ಣವಾಗಿ ಉರಿದು ನಾಶಗೊಂಡಿದೆ. ಬೆಂಕಿ ತಗಲಿದ ಸ್ಕೂಟರ್ ಬಳಿ ಸರ್ವೀಸ್ಗಾಗಿ ನಿಲ್ಲಿಸಿದ್ದ ಇತರ ಹಲವು ದ್ವಿಚಕ್ರ ವಾಹನಗಳೂ ಇದ್ದವು. ಅಗ್ನಿಶಾಮಕದಳದ ಸಕಾಲಿಕ ಕಾರ್ಯಾಚರಣೆಯಿಂದಾಗಿ ಇತರ ವಾಹನಗಳಿಗೆ ಬೆಂಕಿ ಹರಡುವುದು ತಪ್ಪಿಹೋದಂತಾಯಿತು. ಅಗ್ನಿಶಾಮಕದಳದ ಇತರ ಸಿಬ್ಬಂದಿಗಳಾದ ಎಚ್. ಉಮೇಶನ್, ಎಂ.ಎ. ವೈಶಾಖ್, ಗೋಕುಲ್ ಕೃಷ್ಣನ್, ವಿ.ಕೆ. ವೈಶಾಖ್ ಪಾರ್ಥಸಾರಥಿ, ವಿ.ಕೆ. ಶೈಜು, ಹೋಂಗಾರ್ಡ್ಗಳಾದ ಪಿ.ವಿ. ಪ್ರಸಾದ್ ಮತ್ತು ಪಿ. ಶ್ರೀಜಿತ್ ಎಂಬಿವರು ಒಳಗೊಂಡಿದ್ದರು.






