ಹೊಸಂಗಡಿ ವಸತಿಗೃಹದಲ್ಲಿ ಯುವತಿ, ಯುವಕನನ್ನು ಬೆದರಿಸಿದ ತಂಡದ ಕೊಂಡಿ ಮಹಿಳಾ ಪೊಲೀಸ್‌ನ ಕೈ ಬೆರಳು ಮುರಿದು ಪರಾರಿಯಾದ ಆರೋಪಿ ಸೆರೆ

ಕಾಸರಗೋಡು: ಬಂಧಿಸಲಿರುವ ಯತ್ನದ ಮಧ್ಯೆ ಮಹಿಳಾ ಪೊಲೀಸ್‌ನ ಕೈಯ ಬೆರಳನ್ನು ಮುರಿದು ಪರಾರಿಯಾಗಲು ಯತ್ನಿಸಿದ ಆರೋಪಿ ಸೆರೆಯಾಗಿದ್ದಾನೆ. ಹೊಸಬೆಟ್ಟು ನಿವಾಸಿ ಮೊಯ್ದೀನ್ ಸಮಾನ್ (33)ನನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ತಂಡ ಸೆರೆ ಹಿಡಿದಿದೆ. ಇಂದು ಮುಂಜಾನೆ ಮಂಗಳೂರು, ಕಲ್ಲಾಪು ತರಕಾರಿ ಮಾರುಕಟ್ಟೆಯಿಂದ ಸೆರೆ ಹಿಡಿಯಲಾಗಿದೆ. ಆರೋಪಿ ಮಾರುಕಟ್ಟೆಯಲ್ಲಿದ್ದಾನೆಂಬ ಮಾಹಿತಿ ಲಭಿಸಿದ ಆಧಾರದಲ್ಲಿ ಪೊಲೀಸ್ ತಂಡ ತಲುಪಿ ಬಂಧಿಸಿದೆ. ಈತನ ಜೊತೆಗಿದ್ದ ಆರೋಪಿಗಳಾದ ಮಂಜೇಶ್ವರ ಪಿರಾರಮೂಲೆಯ ಕೆ.ಎ. ಹಾರಿಸ್ (40), ಬಡಾಜೆ ಕಾಜೂರ್ ಮಾಲಿ ನಿವಾಸಿ ಟಿ.ಕೆ. ಮುಹಮ್ಮದ್ ಫೈಸಲ್ (೪೩) ಎಂಬಿವರನ್ನು ಈ ಮೊದಲು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಓರ್ವನನ್ನು ಸೆರೆ ಹಿಡಿಯಲು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

೨೦೨೬ ಜನವರಿ ೧೪ರಂದು ಮಧ್ಯಾಹ್ನ 12 ಗಂಟೆಗೆ ಹೊಸಂಗಡಿ ಯಲ್ಲಿ ಕೇಸಿಗೆ ಆಸ್ಪದವಾದ ಘಟನೆ ಸಂಭವಿಸಿತ್ತು. ಉಳ್ಳಾಲ ತಾಲೂಕಿನ ಕೈರಂಗಳ ನಿವಾಸಿ ಮುಹಮ್ಮದ್ ಹನೀಫ್ (41), ಗೆಳತಿ ಮುಡಿಪು ಬಳಿಯ ನಾಟೆಕಲ್ಲಿನ ಇಸ್ರತ್ (30) ಎಂಬಿವರನ್ನು ಆಕ್ರಮಿಸಲಾಗಿತ್ತು. ಇವರಿಬ್ಬರು ಇದ್ದ ಕೊಠಡಿಗೆ ನುಗ್ಗಿದ ತಂಡ ಯುವಕನನ್ನು ಹಾಗೂ ಗೆಳತಿಯನ್ನು ಮಂಚದಲ್ಲಿ ಜೊತೆಗಿರಿಸಿ ಅರೆನಗ್ನ ವೀಡಿಯೋಗಳು ಹಾಗೂ ಭಾವಚಿತ್ರಗಳನ್ನು ಮೊಬೈಲ್ ಫೋನ್ ನಲ್ಲಿ ಚಿತ್ರಿಸಿದ ಬಳಿಕ ಎರಡು ಲಕ್ಷ ರೂ. ನೀಡಬೇಕೆಂದು ಬೆದರಿಕೆಯೊಡ್ಡಿರು ವುದಾಗಿ ಮಂಜೇಶ್ವರ ಪೊಲೀಸರು ಕೇಸು ನೋಂದಾಯಿಸಿದ್ದರು. ಹಣ ನೀಡದಿದ್ದರೆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುವು ದಾಗಿ ಬೆದರಿಸಿದ ಬಳಿಕ 5೦೦೦ ರೂ. ಮತ್ತು ಮೊಬೈಲ್ ಫೋನ್‌ನೊಂದಿಗೆ ಅಕ್ರಮಿ ತಂಡ ಪರಾರಿಯಾಗಿತ್ತು. ಕೇಸಿನ ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸ್ ತಂಡ ಬಂಧಿಸಲೆಂದು ಮಂಗಳೂರಿಗೆ ತೆರಳಿದಾಗ ಮಂಜೇಶ್ವರ ಪೊಲೀಸ್ ಠಾಣೆಯ ಮಹಿಳಾ ಸಿವಿಲ್ ಪೊಲೀಸ್ ಆಫೀಸರ್‌ರ ಕೈಯ ಬೆರಳನ್ನು ಮುರಿದು ಮೊಯ್ದೀನ್ ಸಮಾನ್ ಪರಾರಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈತನನ್ನು ಬಂಧಿಸಿದ ತಂಡದಲ್ಲಿ ಎಸ್‌ಐ ಗಳಾದ ಕೆ.ಆರ್. ಉಮೇಶ್, ರತೀಶ್, ಶಬರಿಕೃಷ್ಣ ಎಂಬಿವರು ಸೇರಿದ್ದರು.

RELATED NEWS

You cannot copy contents of this page