ಕುಂಬಳೆ: ನಿರಂತರ ಆಗ್ರಹಿಸಿದರೂ, ಅಧಿಕಾರಿಗಳಿಗೆ ತಿಳಿಸಿದರೂ ಮಂಜೇಶ್ವರ ಮಂಡಲದ ವಿವಿಧ ಭಾಗಗಳಲ್ಲಿ ಕೆಂಪು ಕಲ್ಲು, ಮರಗಳನ್ನು ಸಾಗಿಸುತ್ತಿರುವುದನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೇಶವ ನಾಯಕ್ ಕುಂಬಳೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಅನಂತಪುರ, ಬಾಯಾರು, ಪಾದೆಕಲ್ಲು ಎಂಬೆಡೆಗಳಿಂದ ಕೆಂಪು ಕಲ್ಲುಗಳನ್ನು ಹಾಗೂ ಹಲವು ಕಡೆಗಳಿಂದ ಮರಗಳನ್ನು ಕಡಿದು ಕರ್ನಾಟಕ, ತಮಿಳುನಾಡಿಗೆ ಸಾಗಿಸಲಾಗುತ್ತಿದೆ. ಕರ್ನಾಟಕದಲ್ಲಿ ಕೆಂಪು ಕಲ್ಲು ಕಡಿಯುವುದನ್ನು ಸರಕಾರ ನಿಷೇದಿಸಿದೆ. ಆದರೆ ಕರ್ನಾಟಕದ ಪಾಸ್ ಉಪಯೋಗಿಸಿ ಕೇರಳದಿಂದ ಕರ್ನಾಟಕಕ್ಕೆ ಕಲ್ಲುಗಳನ್ನು ಸಾಗಿಸಲಾಗುತ್ತಿದ್ದು, ಈ ದಂಧೆಯಲ್ಲಿ ಭಾರೀ ಹಣ ಲಾಭ ಮಾಡಲಾಗುತ್ತಿದೆಯೆಂದು ಅವರು ಆರೋಪಿಸಿದರು. ಕಾಸರಗೋಡಿನ ಕಾಡುಗಳಿಂದ ಮರಗಳನ್ನು ಕಡಿದು ಸ್ಥಳೀಯ ಗಿರಣಿಗಳಲ್ಲಿ ಅದರ ಸಿಪ್ಪೆ ತೆಗೆದು ತಮಿಳುನಾಡಿನ ಮಿಲ್ಲುಗಳಿಗೆ ಕೊಂಡು ಹೋಗಲಾಗುತ್ತಿದೆ. ಕಾಡುಗಳನ್ನು ಕಡಿದು ಹಾಕುವುದರಿಂದಾಗಿ ಕಾಡು ಪ್ರಾಣಿಗಳಿಗೆ ಜೀವಿಸಲು ಸಾಧ್ಯವಾಗದೆ ಅವು ನಾಡಿಗೆ ಇಳಿದು ಜನರಿಗೆ ಉಪಟಳ ನೀಡುತ್ತಿದೆ. ಇದಕ್ಕೆಲ್ಲ ಅಂತ್ಯ ಹಾಡಲು ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ಕೇಶವ ನಾಯಕ್ ತಿಳಿಸಿದ್ದಾರೆ.







