ತಿರುವನಂತಪುರ: ಮಲೆಯಾಳಂ ಭಾಷೆಗೆ ಕೇರಳದ ಏಕೈಕ ಅಧಿಕೃತ ಭಾಷಾ ಸ್ಥಾನಮಾನ ಕಲ್ಪಿಸುವ ಉದ್ದೇಶದಿಂದ ರಾಜ್ಯ ವಿಧಾನಸಭೆ ಕಳೆದ ಅಕ್ಟೋಬರ್ ೯ರಂದು ಅನುಮೋದನೆ ನೀಡಿದ ಮಲೆಯಾಳಂ ಭಾಷಾ ಮಸೂದೆ-೨೦೨೫ಕ್ಕೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಂಕಿತ ಹಾಕಿದ್ದಾರೆ. ಈ ಮೂಲಕ ಮಲೆಯಾಳಂ ಕೇರಳದ ಏಕೈಕ ಅಧಿಕೃತ ಭಾಷೆಯಾಗಿ ವಿದ್ಯುಕ್ತವಾಗಿ ಕಾಯ್ದೆ ರೂಪದಲ್ಲಿ ಜ್ಯಾರಿಗೆ ಬಂದಿದೆ.
ಕೇರಳದಲ್ಲಿ ಮಲೆಯಾಳಂ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸುವ ಉದ್ದೇಶದಿಂದ ೨೦೧೫ ಡಿಸೆಂಬರ್ನಲ್ಲಿ ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಲೆಯಾಳಂ ಭಾಷೆ (ವಿಸ್ತರಣೆ ಹಾಗೂ ಪರಿಪಾಲನೆ) ಮಸೂದೆಗೆ ಅಂದು ಕೇರಳದ ರಾಜ್ಯಪಾಲರಾಗಿದ್ದ ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಸಹಿ ಹಾಕಿರಲಿಲ್ಲ. ಈ ಮಸೂದೆ ಕೇರಳದ ಕನ್ನಡ ಮತ್ತು ತಮಿಳುಭಾಷಾ ಅಲ್ಪಸಂಖ್ಯಾತರ ಸಂವಿಧಾನಯುತ ವಾದ ಹಕ್ಕನ್ನು ಉಲ್ಲಂಘಿಸುತ್ತಿದೆಯೆಂಬ ಸಂಶಯವನ್ನು ಆ ಮಸೂದೆ ಬಗ್ಗೆ ಅಂದಿನ ರಾಜ್ಯಪಾಲರು ವ್ಯಕ್ತಪಡಿಸಿದ್ದರು. ಆ ಕಾರಣದಿಂದ ಅವರು ಪ್ರಸ್ತುತ ಮಸೂದೆಗೆ ಸಹಿ ಹಾಕಿರಲಿಲ್ಲ. ರಾಷ್ಟ್ರಪತಿಯವರು ಅದಕ್ಕೆ ಅಂಕಿತ ಹಾಕಿರಲಿಲ್ಲ. ಈ ಮಸೂದೆ ವಿರುದ್ಧ ಅಂದು ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪ ಸಂಖ್ಯಾತರು ಮತ್ತು ಇಡುಕ್ಕಿ ಜಿಲ್ಲೆಯ ತಮಿಳು ಭಾಷಾ ಅಲ್ಪಸಂಖ್ಯಾತರು ತೀವ್ರ ವಿರೋಧ ವ್ಯಕ್ತಪಡಿಸಿ ಭಾರೀ ಚಳವಳಿ ನಡೆಸಿದ್ದರು. ಅದಾದ ಬಳಿಕ ರಾಜ್ಯದಲ್ಲಿ ಮಲೆಯಾಳಂ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸುವ ೨೦೨೫ರ ಹೊಸ ಮಸೂದೆಗೆ ಕಳೆದವರ್ಷ ಅಕ್ಟೋಬರ್ನಲ್ಲಿ ರಾಜ್ಯ ವಿಧಾನಸಭೆ ಅನುಮೋದನೆ ನೀಡಿತ್ತು. ಈ ಮೂಲಕ ಕನ್ನಡ ಭಾಷಾ ಅಲ್ಪಸಂಖ್ಯಾತರ ಮೇಲೆ ಕಡ್ಡಾಯವಾಗಿ ಮಲೆಯಾಳಂ ಹೇರುವ ಪ್ರಯತ್ನವನ್ನು ವಿರೋಧಿಸಿ ಕಾಸರಗೋಡಿನ ಹಲವು ಕನ್ನಡ ಸಂಘಟನೆಗಳು ವ್ಯಾಪಕ ಚಳವಳಿಯಲ್ಲಿ ತೊಡಗಿದ್ದು, ಅದು ಈಗಲೂ ಮುಂದುವರಿಯುತ್ತಿದೆ. ಮಾತ್ರವಲ್ಲ ಈ ಮಸೂದೆಗೆ ಕರ್ನಾಟಕ ಸರಕಾರವೂ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಮಸೂದೆ ಕಾಯ್ದೆಯಾಗಿ ಜ್ಯಾರಿಗೊಂ ಡಲ್ಲಿ ಅದು ಗಡಿಭಾಗದ ಕನ್ನಡ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಲೆಯಾಳಂ ಕಲಿಯಬೇಕಾಗುತ್ತದೆ ಎಂಬ ಕಳವಳವನ್ನು ವ್ಯಕ್ತಪಡಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರಿಗೆ ಪತ್ರ ಬರೆದಿದ್ದರು. ಈ ಮಸೂದೆಗೆ ಈಗ ರಾಜ್ಯಪಾಲರ ಅಂಕಿತ ಬಿದ್ದಿದೆ. ರಾಜ್ಯದ ಆ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಲೆಯಾಳಂನ್ನು ಪ್ರಥಮ ಭಾಷೆಯಾಗಿ ಕಲಿಸುವುದು ಕಡ್ಡಾಯವೆಂಬ ಅಂಶವನ್ನು ಈ ಮಸೂದೆ ಒಳಗೊಂಡಿದೆ.
ಆದರೆ ಕೇರಳದಲ್ಲಿ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸುವುದಕ್ಕೆ ಸಂಬಂಧಿಸಿದ ಅವಕಾಶಗಳು ಈ ಮಸೂದೆಯಲ್ಲ್ಲಿ ಒಳಗೊಂಡಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾನೂನು ಸಚಿವರು
ಆದರೂ ಈ ಮಸೂದೆ ಬಗ್ಗೆ ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರಲ್ಲಿ ಉಂಟಾಗಿರುವ ತೀವ್ರ ಕಳವಳ ಇನ್ನೂ ಮುಂದುವರಿಯುತ್ತಿದೆ.





