ಕಾಸರಗೋಡು: ಡಿಜಿಟಲ್ ಪ್ಲಾಟ್ ಫಾಂ ಮೂಲಕ ಅನಧಿಕೃತ ವಾಗಿ ಹಣ ಹಸ್ತಾಂತರಿಸುವುದನ್ನು ಪತ್ತೆಹಚ್ಚಲು ರಾಜ್ಯದಲ್ಲಿ ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಲಾಗಿದೆ. ‘ಸೈಬರ್ ಹಂಟ್’ ಎಂಬ ಹೆಸರಲ್ಲಿ ನಡೆಯುವ ಈ ಕಾರ್ಯಾಚರಣೆಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಏಕ ಕಾಲದಲ್ಲಿ ನಡೆಯುತ್ತಿರುವ ಕಾರ್ಯಾ ಚರಣೆಗೆ ಸೈಬರ್ ಪೊಲೀಸರು ನೇತೃತ್ವ ನೀಡುತ್ತಿದ್ದಾರೆ. ಆದರೆ ಇದುವರೆಗೆ ಎಲ್ಲಿಯೂ ಕೇಸು ದಾಖಲಿಸಿಕೊಂಡ ಬಗ್ಗೆ ಮಾಹಿತಿ ಲಭಿಸಿಲ್ಲ. ಈ ಹಿಂದೆ ಕರೆನ್ಸಿಯಾಗಿ ಅನಧಿಕೃತ ಹಣ ಹಸ್ತಾಂತರ ನಡೆಯುತ್ತಿತ್ತು. ಇದು ಪತ್ತೆಹಚ್ಚಲ್ಪಡುವ ಹಿನ್ನೆಲೆಯಲ್ಲಿ ಡಿಜಿಟಲ್ ಪ್ಲಾಟ್ ಫಾಂ ಮೂಲಕ ಹಣ ಹಸ್ತಾಂತರ ನಡೆಯುತ್ತಿರುವ ಬಗ್ಗೆ ಗುಪ್ತಚರ ಏಜೆನ್ಸಿಗಳು ಈ ಹಿಂದೆ ವರದಿ ಮಾಡಿದ್ದವು. ಅನಧಿಕೃತವಾಗಿ ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹಣ ಠೇವಣಿಯಿರಿಸಿದ ಬಳಿಕ ಅದನ್ನು ಸ್ವಂತ ಖಾತೆಗಳಿಗೆ ಕಳುಹಿಸುತ್ತಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಇದಕ್ಕೆ ಪ್ರತ್ಯುಪಕಾರವಾಗಿ ಖಾತೆದಾರನಿಗೆ ೫೦೦೦ ರೂ.ನಿಂದ ೧೦೦೦೦ ರೂ. ವರೆಗೆ ಪ್ರತಿಫಲ ನೀಡುತ್ತಿರುವುದಾಗಿ ತಿಳಿದುಬಂದಿದೆ. ಕಾರ್ಯಾಚರಣೆ ಪೂರ್ಣಗೊಳ್ಳುವುದರೊಂದಿಗೆ ಅನಧಿಕೃತ ಹಣ ವ್ಯವಹಾರಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭಿಸಬಹುದೆಂದು ಅಧಿಕಾರಿಗಳು ನಿರೀಕ್ಷೆಯಿರಿಸಿದ್ದಾರೆ.






