ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಹಿಂದೆ ನಡೆದ ರ್ಯಾಗಿಂಗ್ನ ಹೆಸರಲ್ಲಿ ವಿದ್ಯಾರ್ಥಿಗಳ ಮಧ್ಯೆ ಉಂಟಾದ ಹೊಡೆದಾಟ ಎರಡೂ ಪ್ರದೇಶಗಳ ಯುವಕರ ಮಧ್ಯೆ ಘರ್ಷಣೆಗೆ ಕಾರಣವಾಗಿದೆ. ಮೊನ್ನೆ ಸಂಜೆ ಮುಳ್ಳೇರಿಯ ಜುಮಾ ಮಸೀದಿಯಲ್ಲಿ ನಮಾಜು ನಿರ್ವಹಿಸಿದ ಬಳಿಕ ಮರಳುತ್ತಿದ್ದ ಮೂರು ಮಂದಿ ಮೇಲೆ ಹಲ್ಲೆ ನಡೆಯುವುದರೊಂದಿಗೆ ಸ್ಥಿತಿ ಇನ್ನಷ್ಟು ಗಂಭೀರಾವಸ್ಥೆಗೆ ತಲುಪಲಿದೆಯೆಂಬ ಆತಂಕವುಂಟಾಗಿದೆ. ಆದೂರು ಸಿಎ ನಗರದ ಆಸಿಫ್ (28), ಪೂತಪಲದ ರಹೀಸ್ (18) ಸಹಿತ ಮೂರು ಮಂದಿ ಹಲ್ಲೆಯಿಂದ ಗಾಯಗೊಂಡಿದ್ದರು. ಈ ಪೈಕಿ ಆಸಿಫ್ ಹಾಗೂ ರಹೀಸ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲೂ, ಇನ್ನೋರ್ವ ಚೆಂಗಳ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬುಧವಾರ ರಾತ್ರಿ 10.30ರ ವೇಳೆ ಮುಳ್ಳೇರಿಯದ ಮದೀನ ಹೋಟೆಲ್ ಸಮೀಪದಲ್ಲಿ ಉಂಟಾದ ಘರ್ಷಣೆಯಲ್ಲಿ ಮುಳ್ಳೇರಿಯ ಮೈಂದಪ್ಪಾರೆ ನಿವಾಸಿ ಸುಲೈಮಾನ್ ಸಾಬಿತ್ (40), ಮುಳ್ಳೇರಿಯದ ಪೃಥ್ವಿನ್ (25) ಎಂಬಿವರು ಗಾಯಗೊಂಡಿದ್ದರು. ಈ ಘಟನೆಗೆ ಸಂಬಂಧಿಸಿ ತಾಜುದ್ದೀನ್, ಸತ್ತಾರ್, ಫೈಸಲ್, ಅನ್ಸಾಫ್, ಶೌಕತ್, ರಪಿ, ಆಶಿಕ್,ಅಕಲ್, ಆಸಿಫ್ ಎಂಬಿವರ ವಿರುದ್ಧ ಆದೂರು ಪೊಲೀಸರು ನರಹತ್ಯಾ ಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ಇದರ ಮುಂದುವರಿಕೆಯಾಗಿ ಆಸಿಫ್ ಹಾಗೂ ಮತ್ತಿಬ್ಬರ ಮೇಲೆ ಗುರುವಾರ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಆದೂರು ಶಾಲೆಯಲ್ಲಿ ಪ್ಲಸ್ವನ್-ಪ್ಲಸ್ಟು ವಿದ್ಯಾರ್ಥಿಗಳ ಮಧ್ಯೆ ರ್ಯಾಗಿಂಗ್ನ ಹೆಸರಲ್ಲಿ ಹೊಡೆದಾಟ ನಡೆಯುವುದರೊಂದಿಗೆ ವಿವಾದಗಳು ಹುಟ್ಟಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಈ ವಿವಾದ ಬಳಿಕ ಎರಡು ಪ್ರದೇಶದ ಯುವಕರ ಮಧ್ಯೆಗಿನ ವಿವಾದವಾಗಿ ಬದಲಾಗಿದೆ. ರ್ಯಾಗಿಂಗ್ ನಡೆಸಿದ ವಿದ್ಯಾರ್ಥಿಯನ್ನು ಅಂದು ಶಾಲೆಯಿಂದ ಹೊರಹಾಕಲಾಗಿತ್ತು. ಈ ದ್ವೇಷದಲ್ಲಿ ಹೊರಹಾಕಲ್ಪಟ್ಟ ವಿದ್ಯಾರ್ಥಿಯ ತಂಡ ಹಾಗೂ ವಿರುದ್ಧ ತಂಡ ಮುಳ್ಳೇರಿಯದಲ್ಲಿ ನಡೆದ ಉಪಜಿಲ್ಲಾ ಶಾಲಾ ಕಲೋತ್ಸವ ವೇಳೆ ಹೊಡೆದಾಡಿಕೊಂಡಿದ್ದವು. ಅನಂತರ ಆದೂರು ಪೊಲೀಸರು ಮಧ್ಯೆ ಪ್ರವೇಶಿಸಿ ಎರಡೂ ವಿಭಾಗಗಳನ್ನು ಚರ್ಚೆಗೆ ಕರೆಸಿ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಪರಿಹರಿಸಿದ್ದರು. ಅದರ ಬೆನ್ನಲ್ಲೇ ಶಾಲೆಯಲ್ಲಿ ರ್ಯಾಗಿಂಗ್ ವಿಷಯಕ್ಕೆ ಸಂಬಂಧಿಸಿ ನಡೆದ ಸಣ್ಣ ಘರ್ಷಣೆ ಎರಡು ಪ್ರದೇಶಗಳ ಯುವಕರ ಮಧ್ಯೆಗಿನ ದೊಡ್ಡ ಘರ್ಷಣೆಯಾಗಿ ಬದಲಾಗಿದೆ. ಇದೇ ವೇಳೆ ವಿವಾದಕ್ಕೆ ಶೀಘ್ರ ಪರಿಹಾರ ಕಾಣದಿದ್ದಲ್ಲಿ ಸ್ಥಿತಿ ಗಂಭೀರಸ್ಥಿತಿಗೆ ತಲುಪಲಿದೆಯೆಂದು ಗುಪ್ತಚರ ತನಿಖಾ ವಿಭಾಗ ವರದಿಮಾಡಿದೆ.






