ಜಸೀಲಾ ಆತ್ಮಹತ್ಯೆ ಪ್ರಕರಣ: ನೆರೆಮನೆ ನಿವಾಸಿ ಮಹಿಳೆ ಸೆರೆ

ಕಾಸರಗೋಡು: ಚಿನ್ನ ಕಳವುಗೈದಿರುವುದಾಗಿ ಹೊರಿಸಲಾದ ಆರೋಪದಿಂದ ಮನನೊಂದು ಆಲಂಪಾಡಿ ನಾಲತ್ತಡ್ಕ ನಿವಾಸಿ ಜಸೀಲಾ (24) ಎಂಬಾಕೆ ವಿಷಸೇವಿಸಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ಮನೆಯ ನೆರೆಮನೆ ನಿವಾಸಿಯಾದ ಮಹಿಳೆಯನ್ನು ಬಳಿಕ ವಿದ್ಯಾನಗರ  ಠಾಣೆಯ ಎಸ್‌ಐ ಸಫ್ವಾನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಮುಳಿಯಾರು ಪೊವ್ವಲ್ ಬೆಂಚ್‌ಕೋರ್ಟ್‌ಗೆ ಸಮೀಪದ ಆಯಿಷಾ (48) ಬಂಧಿತಳಾದ ಆರೋಪಿ. ನಂತರ ನ್ಯಾಯಾಲಯದ ಆದೇಶ ಪ್ರಕಾರ ಆಕೆಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಆಕೆಯ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ವಿಷಪ್ರಾಶನಗೈದ ಜಸೀಲ ಚಿಕಿತ್ಸೆ ಮಧ್ಯೆ ಫೆಬ್ರವರಿ 21ರಂದು ಚೆಂಗಳದ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಳು. ಈಕೆ ಆರು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳ ತಾಯಿಯಾಗಿದ್ದಾಳೆ.

ಮುಳಿಯಾರು ಪೊವ್ವಲ್ ಬೆಂಚ್ ಕೋರ್ಟ್ ಬಳಿಯ ನಿವಾಸಿ ಯಾಗಿರುವ ಯುವಕನ ಪತ್ನಿಯಾಗಿರುವ ಜಸೀಲಾ ಅಲ್ಲಿನ ನೆರೆಮನೆಯಿಂದ ಒಂಭತ್ತೂವರೆ ಪವನ್ ಚಿನ್ನ ಕಳವುಗೈದಿರುವುದಾಗಿ ಆರೋಪಿಸಿ  ಆ ಮನೆಯವರು ಆಕೆಯ ವಿರುದ್ಧ ಆದೂರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಜಸೀಲಾಳನ್ನು ವಿಚಾರಣೆಗೊಳಪಡಿಸಿದ್ದರು. ಅದರಿಂದ ತೀವ್ರ ಮನನೊಂದ ಜಸೀಲಾ ಬಳಿಕ ಆಕೆಯ ತವರುಮನೆಯಲ್ಲಿ   ಮನೆಯಲ್ಲಿ ವಿಷಪ್ರಾಶನಗೈದಿದ್ದು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.

ವಿಷಪ್ರಾಶನಗೈಯ್ಯುವ ಮೊದಲು ‘ತನ್ನ  ಮಾತುಗಳನ್ನು ಯಾರೂ ನಂಬುತ್ತಿಲ್ಲ. ಪೊಲೀಸರೂ ನನ್ನ ದೂರನ್ನು ಸ್ವೀಕರಿಸುವುದಿಲ್ಲ. ತನ್ನ  ಹೊರಿಸಲಾಗಿರುವ ಆರೋಪಗಳನ್ನು ಹೊತ್ತು ನನಗೆ ಇನ್ನು ಜೀವಿಸಲು ಸಾಧ್ಯವಾಗದು’ ಎಂದು ಸ್ವಯಂ ಆಗಿ ವೀಡಿಯೋ ರೆಕಾರ್ಡ್ ಮಾಡಿದ್ದಳು. ಜಸೀಲಾಳ ಸಾವಿನ ಬೆನ್ನಲ್ಲೇ ಆಕೆಯ ಸಾವಿಗೆ ಕಾರಣರಾದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಮಾತ್ರವಲ್ಲ ಆ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಊರವರು ಕ್ರಿಯಾ ಸಮಿತಿಗೆ ರೂಪು ನೀಡಿ ಆಗ್ರಹಿಸಿ ರಂಗಕ್ಕಿಳಿದಿದ್ದರು. ಇದೇ ಬೇಡಿಕೆ ಯನ್ನು ವಿವಿಧ ರಾಜಕೀಯ ಪಕ್ಷಗಳು  ಮುಂದಿರಿಸಿದ್ದವು. ಅದರಂತೆ ವಿದ್ಯಾನಗರ ಪೊಲೀಸರು ಜಸೀಲಾಳ ನೆರೆಮನೆಯವಳಾದ ಆಯಿಶಾಳನ್ನು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಂತೆ ಪ್ರಕರಣ ದಾಖಲಿಸಿ ಆಕೆಯನ್ನು ಬಂಧಿಸಿದ್ದಾರೆ.

RELATED NEWS

You cannot copy contents of this page