ಸುಳ್ಯಪದವು ಸೇತುವೆ, ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಕಲ್ಲಗ ಚಂದ್ರಶೇಖರ ರಾವ್‌ರಿಂದ ಕರ್ನಾಟಕ ಮುಖ್ಯಮಂತ್ರಿಗೆ ಮನವಿ

ಬೆಳ್ಳೂರು: ಸುಳ್ಯಪದವು ಸೇತುವೆಯ ಪುನರ್ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಬೇಕೆಂದು ವಿನಂತಿಸಿ ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್ ಕಲ್ಲಗ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಮನವಿ ಸಲ್ಲಿಸಿದರು. ಮನವಿಯ ಪ್ರತಿಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೂ ಸಲ್ಲಿಸಲಾಗಿದೆ.

ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇರಳ-ಕರ್ನಾಟಕ ಗಡಿ ಪ್ರದೇಶಗಳಲ್ಲಿರುವ ಸುಳ್ಯಪದವು ಸೇತುವೆ ಅಗಲಕಿರಿದಾಗಿದ್ದು, ಅಲ್ಲದೆ ಹೊಂಡಗಳಿಂದ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಮುಳ್ಳೇರಿಯ, ಬೆಳ್ಳೂರು, ಕಿನ್ನಿಂಗಾರು ಭಾಗದ ಜನರಿಗೆ ಪುತ್ತೂರಿಗೆ ತೆರಳಲು ಸುಳ್ಯಪದವು ಹತ್ತಿರದ ದಾರಿಯಾಗಿದೆ.

ಬೆಳ್ಳೂರಿನಿಂದ ಸುಳ್ಯಪದವು ಸೇತುವೆವರೆಗೆ ರಸ್ತೆ ಉತ್ತಮವಾಗಿದೆ. ಆದರೆ ಸುಳ್ಯಪದವು ಸೇತುವೆ ಶೋಚನೀಯವಾಗಿದೆ. ಅಲ್ಲದೆ ಸೇತುವೆಯಿಂದಾಚೆ 1 ಕಿಲೋ ಮೀಟರ್ ರಸೆ ಅಗಲಕಿರಿದಾಗಿದೆ. ಈ ಸೇತುವೆ ಹಾಗೂ ರಸ್ತೆ ಅಭಿವೃದ್ಧಿಯಾದರೆ ಮುಳ್ಳೇರಿಯ-ಪುತ್ತೂರು, ಬದಿಯಡ್ಕ-ಪುತ್ತೂರು ಮಧ್ಯೆ ಅಂತರ ಕಡಿಮೆಯಾಗಿ ಈ ಭಾಗದ ಜನರಿಗೆ ವಿವಿಧ ಅಗತ್ಯಗಳಿಗೆ ಪುತ್ತೂರಿಗೆ ತೆರಳಲು ಸುಲಭವಾಗಲಿದೆ.

ಈಗಾಗಲೇ ಈ ಭಾಗದ ಹಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪುತ್ತೂರಿಗೆ ತೆರಳುತ್ತಿದ್ದಾರೆ. ಅದೇ ರೀತಿ ಅಡಿಕೆ, ತೆಂಗು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಪುತ್ತೂರಿನ ಮಾರುಕಟ್ಟೆಗೆ ತಲುಪಿಸಲು ಇದೇ ರಸ್ತೆಯಲ್ಲಿ ತೆರಳಬೇಕಾಗಿದೆ. ಆದ್ದರಿಂದ ಸುಳ್ಯಪದವು ಸೇತುವೆ ಹಾಗೂ ರಸ್ತೆಯ ಅಭಿವೃದ್ಧಿ ಅನಿವಾರ್ಯವಾಗಿ ದೆಯೆಂದು ಮನವಿಯಲ್ಲಿ ಕಲ್ಲಗ ಚಂದ್ರಶೇಖರ ರಾವ್ ವಿನಂತಿಸಿದ್ದಾರೆ.

You cannot copy contents of this page