ಗಡಿನಾಡು ಕನ್ನಡ ಸಂಜೆ ಪತ್ರಿಕಾ ಸಂಪಾದಕ ಗಣೇಶ್ ಕೆ ನಿಧನ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಪ್ರಪ್ರಥಮ ಕನ್ನಡ ಸಂಜೆ ಪತ್ರಿಕೆಯಾದ ಗಡಿನಾಡು ಇದರ ಸಂಪಾದಕ ಉಳಿಯತ್ತಡ್ಕ ಭಗವತೀನಗರದ ಕೋಕಿಲಾ ನಿಲಯದ ಗಣೇಶ ಕೆ (66) ನಿನ್ನೆ ನಿಧನಹೊಂದಿದರು. ಗಡಿನಾಡು ಪತ್ರಿಕೆಯ ಸಂಪಾದಕ, ಪ್ರಕಾಶಕ ಹಾಗೂ ನುರಿತ ಮುದ್ರಣಗಾರರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಕಾಸರಗೋಡು ಕರಂದಕ್ಕಾಡು ವೀರಹನುಮಾನ್ ವ್ಯಾಯಾಮ ಶಾಲೆಯ ಸ್ಥಾಪಕ ಸದಸ್ಯರೂ ಆಗಿದ್ದರು. ನಿನ್ನೆ ಮನೆಯಲ್ಲಿ ಇವರಿಗೆ ಎದೆನೋವು ಕಾಣಿಸಿಕೊಂಡು ಅಲ್ಲೇ ಕುಸಿದುಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾ ಯಿತಾದರೂ ಅದು ಫಲಕಾರಿಯಾಗದೆ ಮಧ್ಯಾಹ್ನವೇಳೆ  ನಿಧನ ಹೊಂದಿದರು. ದಿ| ಕಿಟ್ಟ ಪೂಜಾರಿ-ಕೊರ್ಪಳು ದಂಪತಿ ಪುತ್ರನಾಗಿರುವ ಗಣೇಶ ಕೆ ಮೂಲತಃ ಕಾಸರಗೋಡು ಸೂರ್ಲು ನಿವಾಸಿಯಾಗಿದ್ದಾರೆ. ಮೊದಲು ನಗರದ ಚಕ್ಕರ ಬಜಾರ್‌ನಲ್ಲಿ  ಮುದ್ರಿಸಲ್ಪಡುತ್ತಿದ್ದ ಗಡಿನಾಡು ಪತ್ರಿಕೆಯ ಕಚೇರಿಯನ್ನು ಬಳಿಕ ಗಣೇಶರು ಸೂರ್ಲಿನಲ್ಲಿರುವ ತಮ್ಮ ಮನೆ ಪಕ್ಕಕ್ಕೆ ಸ್ಥಳಾಂತರಿಸಿ ವರ್ಷಗಳ ತನಕ ಪತ್ರಿಕೆಯನ್ನು  ಅಲ್ಲೇ ಮುದ್ರಿಸಲಾಗು ತ್ತಿತ್ತು.

 ಆದರೆ ಬಳಿಕ ಪತ್ರಿಕೆ ಸಂಕಷ್ಟದ ಹಾದಿಯಲ್ಲಿ ಸಾಗತೊಡಗಿದ್ದಾಗ ಅದರ ಮುದ್ರಣವನ್ನು ನಿಲ್ಲಿಸಬೇಕಾಗಿ ಬಂದಿತ್ತು. ಮೃತರು ಪತ್ನಿ ಮಾಲತಿ, ಮಕ್ಕಳಾದ ಕಿಶೋರ್, ಸ್ಮಿತ, ಅಳಿಯ ಕಮಲಾಕ್ಷ, ಸೊಸೆ ಉಷ, ಸಹೋದರರಾದ ಸೋಮಪ್ಪ ಕೆ, ಶಿವ ಕೆ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಸಹೋದರಿ ಸುನಂದಾ ಈ ಹಿಂದೆ ನಿಧನಹೊಂದಿದ್ದರು. ಗಣೇಶ್‌ರ ನಿಧನಕ್ಕೆ  ಕನ್ನಡ ಪತ್ರಕರ್ತರು ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

You cannot copy contents of this page