ಉಪ್ಪಳ: ದೇರಂಬಳದಲ್ಲಿ ಕಾಲು ಸೇತುವೆ ಕುಸಿದು ಬಿದ್ದು ಹಲವು ವರ್ಷಗಳು ಕಳೆದರೂ ನಿರ್ಮಾಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಊರವರಿಗೆ ಸಮಸ್ಯೆಯಾಗಿದೆ. ಮಂಗಲ್ಪಾಡಿ, ಮೀಂಜ ಪಂಚಾಯತ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಈಗ ಸಂಚಾರ ದುಸ್ತರವಾಗಿದೆ. ದೇರಂಬಳ, ಚಿಗುರುಪಾದೆ, ಬುಡ್ರಿಯ, ಕಲ್ಲಗದ್ದೆ, ತೊಟ್ಟೆತ್ತೋಡಿ, ಬೇಕೂರು, ಪೈವಳಿಕೆ, ಜೋಡುಕಲ್ಲು, ಮಡಂದೂರು ಮೊದಲಾದ ಪ್ರದೇಶಗಳ ಜನರಿಗೆ ಅತ್ತಿತ್ತ ಸಂಚರಿಸಲು ಸಂಪರ್ಕ ಸೇತುವೆ ಇದಾಗಿತ್ತು.
ಆದರೆ ಈಗ ಈ ಪ್ರದೇಶಗಳಿಗೆ ಹಲವಾರು ಕಿಲೋ ಮೀಟರ್ ಸುತ್ತು ವರಿದು ಬಾಯಿಕಟ್ಟೆ, ಕಳಾಯಿ ರಸ್ತೆ ಮೂಲಕ ಸಾಗಬೇಕಾಗಿದೆ. ಮುರಿದು ಬಿದ್ದ ಸೇತುವೆಯನ್ನು ಪುನರ್ ನಿರ್ಮಾಣ ಮಾಡಬೇಕೆಂಬ ಊರವರ ಬೇಡಿಕೆ ಇನ್ನೂ ಈಡೇರಲೇ ಇಲ್ಲ. ದೇರಂಬಳ ಹೊಳೆಗೆ ಅಡ್ಡವಾಗಿ ನಿರ್ಮಿಸಿದ್ದ ಸೇತುವೆ ಕುಸಿದು ವರ್ಷಗಳು ಸಂದರೂ ಯಾವುದೇ ಯೋಜನೆಗಳು ಕಾರ್ಯ ರೂಪಕ್ಕೆ ಬರಲಿಲ್ಲ ಎಂದು ಸ್ಥಳೀಯರು ತಮ್ಮ ನೋವನ್ನು ವ್ಯಕ್ತಪಡಿಸಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು, ದಿನನಿತ್ಯ ವಿವಿಧ ಕೆಲಸಗಳಿಗೆ ತೆರಳುವವರಿಗೆ ಈ ಸೇತುವೆ ಸುಗಮ ಸಂಚಾರದ ಕೊಂಡಿಯಾಗಿತ್ತು. ಆದರೆ ಈ ಭಾಗದ ಜನರ ಸಂಚಾರ ಮೊಟಕುಗೊಂಡು ಕಷ್ಟಪಡುವಂತಾಗಿದೆ. ಊರಿನ ಸ್ಥಳೀಯ ಯುವಕರು ಸೇರಿ ತಾತ್ಕಾಲಿಕ ಪರಿಹಾರಕ್ಕಾಗಿ ಎರಡು ಬಾರೀ ಕಂಗಿನ ಸಂಕವನ್ನು ನಿರ್ಮಿಸಿದ್ದು, ಆದರೆ ಅದು ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಶಾಶ್ವತ ಸೇತುವೆಯನ್ನು ನಿರ್ಮಿಸಿ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಊರವರು ಒತ್ತಾಯಿಸಿದ್ದಾರೆ.






