ಬದಿಯಡ್ಕ: ಜೀರ್ಣೋದ್ಧಾರಗೊಂಡ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನವು ಇಂದು ದೇವಸ್ಥಾನ ಹೇಗಿರಬೇಕೋ ಹಾಗೇ ಬದಲಾಗಿದೆ. ಬಹಳಷ್ಟು ಮಂದಿ ಊರು ಬಿಟ್ಟು ಹೊರಹೋಗಿದ್ದರೂ, ಉದನೇಶ್ವರನ ಮೂಲಕ ಭಕ್ತರು ಒಂದಾಗಿದ್ದಾರೆ. ಉದನೇಶ್ವರನ ಬಿಟ್ಟು ದೂರಹೋಗಿಲ್ಲ. ಜೀವನಕ್ಕೋಸ್ಕರ ಹೊರರಾಜ್ಯದಲ್ಲಿದ್ದರೂ ಅವರೆಲ್ಲರೂ ಉದನೇಶ್ವರನ ಭಕ್ತರಾಗಿಯೇ ಇದ್ದಾರೆ. ತುಂಬ ಚಂದದ ದೇವಸ್ಥಾನವಾಗಿ ಪೆರಡಾಲ ಬದಲಾಗಿದೆ. ಪೆರಡಾಲದ ಬ್ರಹ್ಮಕಲಶೋತ್ಸವದ ಬಗ್ಗೆ ಎಲ್ಲರ ಬಾಯಲ್ಲೂ ಅದ್ಭುತ ಅದ್ಭುತ ಎಂಬ ಮಾತು ಕೇಳಿಬರುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅವರು ಆಶೀರ್ವಚನ ನೀಡಿ ಮಾತನಾಡಿದರು. ನಿನ್ನೆ ಮಧ್ಯಾಹ್ನ ಶ್ರೀಕ್ಷೇತ್ರಕ್ಕೆ ಆಗಮಿಸಿದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಶ್ರೀದೇವರ ದರ್ಶನವನ್ನು ಗೈದ ಅವರು ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಅವರೊಂದಿಗೆ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನೆ ನಡೆಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಭಾಕಾರ್ಯಕ್ರಮದಲ್ಲಿ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ, ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪೆರಡಾಲ ಶ್ರೀ ಉದನೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ
ಬದಿಯಡ್ಕ: ಸಹಸ್ರಾರು ಮಂದಿ ಭಗವದ್ಭಕ್ತರ ಶ್ರದ್ಧಾಭಕ್ತಿಯ ಪ್ರಾರ್ಥನೆಯೊಂದಿಗೆ ಪೆರಡಾಲ ಶ್ರೀ ಉದನೇಶ್ವರ ದೇವರಿಗೆ ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಬ್ರಹ್ಮಕಲಶಾಭಿಷೇಕ ನೆರವೇರಿಸಿದರು. ನಿನ್ನೆ ಪ್ರಾತಃಕಾಲ ಗಣಪತಿ ಹೋಮ, ಗೋವಿನ ದರ್ಶನದೊಂದಿಗೆ ಕವಾಟೋದ್ಘಾಟನೆ ನಡೆಯಿತು. ಶ್ರೀದೇವರನ್ನು ಪ್ರಾರ್ಥಿಸಿದ ತಂತ್ರಿಗಳು ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ತೆರೆದರು. ಕವಾಟಬಂಧನದ ಸಂದರ್ಭ ಉರಿಸಿದ ೩ ಭದ್ರದೀಪಗಳು ಬೆಳಗುತ್ತಿರಲು ಶ್ರೀದೇವರಿಗೆ ಶುದ್ಧ ದೇಶೀಯ ತಳಿಯ ಗೋವಿನ ದರ್ಶನ ಮಾಡಲಾಯಿತು. ಪರಮಪೂಜ್ಯ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನಮ್ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಸಹಸ್ರ ಕಲಶಾಭಿಷೇಕ – ಬ್ರಹ್ಮಕಲಶಾಭಿಷೇಕ, ಅವಭೃತ ಪ್ರೋಕ್ಷಣೆ, ಮಹಾಪೂಜೆ, ಮಂಗಲ ಮಂತ್ರಾಕ್ಷತೆ ನಡೆಯಿತು.
ವರ್ಷಾವಧಿ ಉತ್ಸವ ಆರಂಭ
ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಇಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಆರಂಭಗೊಂಡಿತು. ಬಳಿಕ ರುದ್ರಾಭಿಷೇಕ ನಡೆಯಿತು. ಮಧ್ಯಾಹ್ನ 12೧೨ರಿಂದ ತುಲಾಭಾರ ಸೇವೆ, ಸಂಜೆ 6.30ರಿಂದ ದೀಪಾರಾಧನೆ, 6.45ರಿಂದ ತಾಯಂಬಕ, ರಾತ್ರಿ ೮ಕ್ಕೆ ಪೂಜೆ, 9ರಿಂದ ಶ್ರೀ ಭೂತ ಬಲಿ ಉತ್ಸವ, ಬೆಡಿ ಸೇವೆ, ನವಕಾಭಿಷೇಕ, ವಸಂತ ಪೂಜೆ, ನಾಳೆ ಬೆಳಿಗ್ಗೆ 7.30ಕ್ಕೆ ಪೂಜೆ, 10ರಿಂದ ಶ್ರೀ ದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಬಳಿಕ ಶ್ರೀ ಪಿಲಿಚಾ ಮುಂಡಿ ದೈವದ ಕೋಲ ನಡೆಯಲಿ ರುವುದು.
ಸಾಂಸ್ಕೃತಿಕ ಕಾರ್ಯಕ್ರಮದಂ ಗವಾಗಿ ನಟರಾಜ ವೇದಿಕೆಯಲ್ಲಿ ಇಂದು ಮಧ್ಯಾಹ್ನ 12.30ರಿಂದ ಯಕ್ಷಗಾನ ತಾಳಮದ್ದಳೆ, ಅಪರಾಹ್ನ ೩ರಿಂದ ಶಾಸ್ತ್ರೀಯ ಸಂಗೀತ, 4ರಿಂದ ಭರತನಾಟ್ಯ, 5ರಿಂದ ವಯಲಿನ್, ರಾತ್ರಿ 7.30ರಿಂದ ಯಕ್ಷಗಾನ ‘ಶ್ರೀ ಶನೀಶ್ವರ ಮಹಾತ್ಮೆ’, ಕೈಲಾಸ ವೇದಿಕೆಯಲ್ಲಿ ಮಧ್ಯಾಹ್ನ 1.30ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4ರಿಂದ ನೃತ್ಯ ವೈಭವ, ನಾಳೆ ಬೆಳಿಗ್ಗೆ 9.30ರಿಂದ ಗಾನ ವೈಭವ ನಡೆಯಲಿದೆ.







