ಮಂಜೇಶ್ವರ: ಭಾರೀ ಮಾದಕವಸ್ತುವಾದ ಎಂಡಿಎಂಎ ಸಹಿತ ಮೂರು ಮಂದಿ ಮಂಜೇಶ್ವರದಲ್ಲಿ ಸೆರೆಗೀಡಾಗಿದ್ದಾರೆ. ಕಾಸರಗೋಡು ಆಲಂಪಾಡಿ ಟಿಪ್ಪುನಗರದ ಮುಹಮ್ಮದ್ ಸಹಲ್ ಸಿ.ಎ, ಎರ್ನಾಕುಳಂ ನೋರ್ತ್ ಪರವೂರ್ ಪೊನ್ನಾನಿಯಿಲ್ ಹೌಸ್ನ ಅರುಣ್ ಕುಮಾರ್, ಕಲ್ಲಿಕೋಟೆ ವಡಗರ ಪುತ್ತೂರು ಮಯೂರ ಹೌಸ್ನ ಅನುಷ್ ಎಂ.ಪಿ. ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ಕೈಯಿಂದ ಸುಮಾರು 50 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಸ್ಪೆಶಲ್ ಸ್ಕ್ವಾಡ್ ನಿನ್ನೆ ರಾತ್ರಿ 7.30ರ ವೇಳೆ ಮಂಜೇಶ್ವರ ಪಾವೂರು ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಮೂರು ಮಂದಿಯನ್ನು ಮಾದಕವಸ್ತು ಸಹಿತ ಸೆರೆ ಹಿಡಿಯಲಾಗಿದೆ. ಆರೋಪಿಗಳು ಸಂಚರಿಸಿದ ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಗೆ ಮಾದಕ ವಸ್ತು ಸಾಗಾಟವಾಗುತ್ತಿರುವ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ಎಸ್ಪಿ ನೇತೃತ್ವದ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ವಶಪಡಿಸಲಾಗಿದೆ. ಬಳಿಕ ಮಂಜೇಶ್ವರ ಸಿಐ ಜಿಜೀಶ್ ನೇತೃತ್ವದಲ್ಲಿ ಎಸ್ಐಗಳಾದ ವೈಷ್ಣವ್ ರಾಮಚಂದ್ರನ್, ಶಬರಿಕೃಷ್ಣನ್, ರತೀಶ್ ಎಂಬಿವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.






