ಕಾಸರಗೋಡು: ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು 12 ವರ್ಷ ಕಠಿಣ ಸಜೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಪಾಡಿ ಗ್ರಾಮದ ಎದುರ್ತೋಡು ನಿವಾಸಿ ಇ. ರಂಜಿತ್ ಅಲಿಯಾಸ್ ಬಂಗನ್ (29) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ೯ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2021 ಎಪ್ರಿಲ್ ೩ರಂದು ರಾತ್ರಿ ಎದುರ್ತೋಡು ನಿವಾಸಿ ಸಿ.ಎಚ್. ರಾಘವ ಎಂಬವರನ್ನು ಚಾಕುವಿನಿಂದ ಎದೆ ಮತ್ತು ಕೈಗೆ ಇರಿದು ಕೊಲೆಗೈಯ್ಯ ಲೆತ್ನಿಸಿದ ಆರೋಪದಂತೆ ವಿದ್ಯಾನಗರ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಅಂದು ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ನಿಬಿನ್ ಜೋಯ್ ಮೊದಲು ಈ ಪ್ರಕರಣದ ತನಿಖೆ ನಡೆಸಿದ್ದರು. ನಂತರ ಅಂದಿನ ಇನ್ಸ್‌ಪೆಕ್ಟರ್ ಶ್ರೀಜಿತ್ ಕೊಡಿಯೇರಿ ಈ ಪ್ರಕರಣದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರವಾಗಿ ಹೆಚ್ಚುವರಿ ಸರಕಾರಿ ಪ್ಲೀಡರ್ ಚಂದ್ರಮೋಹನ್ ಜಿ. ಮತ್ತು ನ್ಯಾಯವಾದಿ ಚಿತ್ರಕಲ ಎಂ. ನ್ಯಾಯಾಲಯದಲ್ಲಿ ವಾದಿಸಿದ್ದರು.






