ಪುತ್ತಿಗೆ ಪಂಚಾಯತ್‌ನ ಸ್ಥಳದಿಂದ ಮರಗಳನ್ನು ಕಡಿದು ಸಾಗಾಟ: ಕೇಸು ದಾಖಲು; ಪಂಚಾಯತ್ ಕಚೇರಿಗೆ ಡಿವೈಎಫ್‌ಐ ಮಾರ್ಚ್

ಪುತ್ತಿಗೆ: ಪುತ್ತಿಗೆ ಪಂಚಾಯತ್‌ನ ಅಧೀನತೆಯಲ್ಲಿರುವ ಸ್ಥಳದಿಂದ 1 ಲಕ್ಷ ರೂ. ಮೌಲ್ಯದ ಮರಗಳನ್ನು ಕಡಿದು ಸಾಗಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಯದರ್ಶಿ ಸುದೀಶ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಎಡನಾಡು ವಿಲ್ಲೇಜ್‌ನ ಕೋರ್ನಕಂಡ ಎಂಬಲ್ಲಿ ಪಂಚಾಯತ್ ಅಧೀನತೆಯಲ್ಲಿರುವ ತೋಡಿನ ಬದಿಯಲ್ಲಿದ್ದ ಸುಮಾರು 50 ವರ್ಷಗಳ ಹಳಮೆಯುಳ್ಳ ಮಾವು, ಹಾಲೆ, ಅಕೇಶಿಯಾ ಮರಗಳನ್ನು ಕಡಿದು ಸಾಗಿಸಿರುವುದಾಗಿ ಪಂಚಾಯತ್ ಕಾರ್ಯದರ್ಶಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮೇ 26ರಂದು ಮರ ಕಡಿದು ಸಾಗಿಸಿರುವುದಾಗಿ ಸಂಶಯಿಸಲಾಗುತ್ತಿದೆ. ತೋಡಿನ ಸಮೀಪದಲ್ಲಿ ಖಾಸಗಿ ವ್ಯಕ್ತಿಯ ಮಾಲಕತ್ವದಲ್ಲಿರುವ ಸ್ಥಳದಲ್ಲಿದ್ದ ಮರಗಳನ್ನು ಕಡಿದು ಸಾಗಿಸುವ ಮರೆಯಲ್ಲಿ ಪಂಚಾಯತ್‌ನ ಅಧೀನತೆಯಲ್ಲಿರುವ ಸ್ಥಳದ ಮರಗಳನ್ನೂ ಕಡಿದು ಸಾಗಿಸಿರುವುದಾಗಿ ಸಂಶಯಿಸಲಾಗುತ್ತಿದೆ. ಮರ ಕಡಿದು ಸಾಗಿಸಿದವರನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದೇ ವೇಳೆ ಮರ ಕೊಳ್ಳೆ ಹೊಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ರಂಗಕ್ಕಿಳಿದಿದೆ. ಈ ಬೇಡಿಕೆ ಮುಂದಿರಿಸಿ ಇಂದು ಪುತ್ತಿಗೆ ಪಂಚಾಯತ್ ಕಚೇರಿಗೆ ಡಿವೈಎಫ್‌ಐ ಮಾರ್ಚ್ ನಡೆಸಲು ಸಿದ್ಧತೆ ನಡೆಸಿದೆ.

You cannot copy contents of this page