ಮಂಜೇಶ್ವರ: ಕರ್ನಾಟಕದಿಂದ ಶೌಚಾಲಯ ತ್ಯಾಜ್ಯವನ್ನು ಟ್ಯಾಂಕರ್ ಮೂಲಕ ತಂದು ಕೇರಳದ ಗಡಿ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಉಪೇಕ್ಷಿಸುವ ಕೃತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊನ್ನೆ ರಾತ್ರಿ ಮಂಜೇಶ್ವರದ ಬಡಾಜೆ ಚೌಕಿಯ ಸಾರ್ವಜನಿಕ ಸ್ಥಳದಲ್ಲಿ ಟ್ಯಾಂಕರ್ ಲಾರಿ ಮೂಲಕ ತಂದ ಶೌಚಾಲಯ ತ್ಯಾಜ್ಯವನ್ನು ಸುರಿಯಲÁಗಿದೆ. ಇದರಿಂದ ದುರ್ಗಂಧ ಹರಡಿದ್ದು, ಸ್ಥಳೀಯರ ನೆಮ್ಮದಿ ಕೆಡಿಸಿದೆ. ಈ ರಸ್ತೆಯ ಮೂಲಕ ಶಾಲಾ, ಕಾಲೇಜು ಮಕ್ಕಳ ಸಹಿತ ದಿನ ನಿತ್ಯ ನೂರಾರು ಜನರು ನಡೆದು ಹೋಗುತ್ತಿದ್ದಾರೆ. ತ್ಯಾಜ್ಯದಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುವ ಸಾಧ್ಯತೆಯಿದ್ದು, ಪರಿಸರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಅಲ್ಲದೆ ಬಾವಿ ಸಹಿತ ಜಲ ಮೂಲಗಳ ನೀರು ಕೆಟ್ಟುಹೋಗುವ ಭೀತಿ ಸ್ಥಳೀಯರಲ್ಲಿ ಉಂಟಾಗಿದೆ. ರಾತ್ರಿ ಹೊತ್ತಲ್ಲಿ ಮಲಿನ ಜಲ ತಂದು ಉಪೇಕ್ಷಿಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇತ್ತೀಚೆಗೆ ಪೊಸೋಟು ಸೇತುವೆ ಬಳಿ, ಬಾಯಿಕಟ್ಟೆ ಏದಾರ್ನಲ್ಲಿಯೂ ಇದೇ ರೀತಿ ತ್ಯಾಜ್ಯವನ್ನು ಉಪೇಕ್ಷಿಸಲಾಗಿದೆ. ಈ ಮಾಹಿತಿ ತಿಳಿದು ಬಡಾಜೆ ಚೌಕಿ ಪ್ರದೇಶಕ್ಕೆ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಭೇಟಿ ನೀಡಿ ಸಿಸಿ ಕ್ಯಾಮರ ಅಳವಡಿಸುವ ಭರವಸೆಯೊಂದಿಗೆ ಇಂತಹ ಕೃತ್ಯಗಳನ್ನು ನಡೆಸುವವರನ್ನು ಕಾನೂನಿನ ಮುಂದೆ ತರಲು ಸರ್ವ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ.






