ಕುಂಬಳೆ: ಕುಂಬಳೆ ಪೇಟೆ ಜಂಕ್ಷನ್ನ ಕೆಎಸ್ಟಿಪಿ ರಸ್ತೆಯಲ್ಲಿ ಗೂಡಂಗಡಿಗಳಿಂದಾಗಿ ಪೇಟೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆಯೆಂದು ತಿಳಿಸಿ ಕಾಂಗ್ರೆಸ್ ಮಂಡಲ ಅಧ್ಯಕ್ಷ ರವಿ ಪೂಜಾರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಅತೀ ಹೆಚ್ಚು ಜನ, ವಾಹನ ಸಂದಣಿಯುಳ್ಳ ಈ ಜಂಕ್ಷನ್ನಲ್ಲಿ ಗೂಡಂಗಡಿಗಳು ಪದೇ ಪದೇ ತಲೆಯೆತ್ತುತ್ತಿವೆಯೆಂದು ದೂರಿನಲ್ಲಿ ತಿಳಿಸಲಾಗಿದೆ.
ಪಂಚಾಯತ್ ಅಧಿಕಾರಿಗಳಿಗೆ, ರಸ್ತೆ ವಿಭಾಗದ ಅಧಿಕಾರಿಗಳಿಗೆ ಹಾಗೂ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದರೂ ಸ್ಥಳ ಅತಿಕ್ರಮಿಸಿ ನಿರ್ಮಿಸಿದ ಬೀದಿ ವ್ಯಾಪಾರಕ್ಕೆ ವಿದ್ಯುತ್ ಸಂಪರ್ಕ ಕೂಡಾ ನೀಡಲಾಗಿದೆಯೆಂದು ರವಿ ಪೂಜಾರಿ ಆರೋಪಿಸಿದ್ದಾರೆ. ಬೀದಿ ವ್ಯಾಪಾರಕ್ಕಾಗಿ ಕೆಲವರು ಶಾಶ್ವತ ಶೆಡ್ ನಿರ್ಮಿಸಿದ್ದಾರೆ. ಭಾರೀ ಜನಸಂದಣಿಯುಳ್ಳ ಈ ರಸ್ತೆಯಲ್ಲಿ ಅನಧಿಕೃತವಾಗಿ ಬೀದಿ ವ್ಯಾಪಾರ ನಡೆಸುವುದು ಕಾನೂನು ವಿರುದ್ಧವಾಗಿದ್ದಲ್ಲಿ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಪಟ್ಟಿದ್ದಾರೆ. ಅಲ್ಲದೆ ಗೂಡಂಗಡಿಗಳ ವ್ಯಾಪಾರದ ಬಗ್ಗೆ ನಾಗರಿಕರಿಗೆ ಹಲವು ಸಂಶಯಗಳಿರು ವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.







