ಕಾಸರಗೋಡು: ನಿರೂಪಣಾ ಕ್ಷೇತ್ರದ ಸಾಧನೆ, ಸಾಮರ್ಥ್ಯವನ್ನು ಪರಿಗಣಿಸಿ ಮುಂಬೈ ಅಂಧೇರಿ ಕರ್ನಾಟಕ ಸಂಘ ನಿರೂಪಕ, ಸಂಘಟಕ ರವಿ ನಾಯ್ಕಾಪು ಅವರಿಗೆ ನಿರೂಪಣಾ ಕೌಸ್ತುಭ ಪ್ರಶಸ್ತಿ ಘೋಷಿಸಿದೆ. ಈ ತಿಂಗಳ 28ರಂದು ಮುಂಬೈ ಕುರ್ಲಾ ಬಂಟರ ಭವನದಲ್ಲಿ ಜರಗಲಿರುವ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಘದ ಸಂಸ್ಥಾಪಕ ಕೃಷ್ಣ ಬಿ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಕಾರ್ಯಕ್ರಮಗಳ ನಿರೂಪಕರಾಗಿ, ಪತ್ರಕರ್ತ, ಸಂಘಟಕರಾಗಿರುವ ಇವರು ಐದು ಪುಸ್ತಕಗಳನ್ನು ರಚಿಸಿದ್ದಾರೆ. ಪತ್ರಿಕಾ ದೃಶ್ಯ ಮಾಧ್ಯಮಗಳಲ್ಲೂ, ವರದಿಗಾರ, ಉಪಸಂಪಾದಕ, ಸುದ್ದಿ ಸಂಪಾದಕರಾಗಿ ದುಡಿದ ಇವರು ವಾರ್ತಾ ವಾಚಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಹಿತ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.






