ಕಾಸರಗೋಡು: ಕಳನಾಡಿನಲ್ಲಿರುವ ಚೆಮ್ನಾಡು ವನಿತಾ ಸರ್ವೀಸ್ ಸೊಸೈಟಿಯಲ್ಲಿ ನಕಲಿ ಚಿನ್ನ ಅಡವಿರಿಸಿ 4.40 ಲಕ್ಷ ರೂ. ಸಾಲ ಪಡೆದು ವಂಚನೆ ಗೈದ ಪ್ರಕರಣದ ಆರೋಪಿಯನ್ನು ಮೇಲ್ಪರಂಬ ಪೊಲೀಸ್ ಠಾಣೆ ಎಸ್ಐ ಎ.ಟಿ. ಅಖಿಲ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಚಂದ್ರಗಿರಿ ಕೀಯೂರು ವೀಟಿಲ್ನ ಕೆ. ಸಾಜುದ್ದೀನ್ (47) ಬಂಧಿತ ಆರೋಪಿ. ಈತನನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕಳೆದ ಮಾರ್ಚ್ ತಿಂಗಳಿಂದ ಆರಂಭಗೊಂಡು ಮುಂದಿನ ಮೂರು ತಿಂಗಳಲ್ಲಾಗಿ ಆರೋಪಿ ನಕಲಿ ಚಿನ್ನದ ಸರ, ನಾಲ್ಕು ಬಳೆಗಳು ಸೇರಿ ಒಟ್ಟು 48.21 ಗ್ರಾಂ ಆಭರಣಗಳನ್ನು ವನಿತಾ ಸರ್ವೀಸ್ ಸೊಸೈಟಿಯಲ್ಲಿ ಅಡವಿರಿಸಿ ಸಾಲ ಪಡೆದು ವಂಚಿಸಿದ್ದನು. ನಂತರ ಆ ಒಡವೆಗಳನ್ನು ಸೊಸೈಟಿಯವರು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ನಕಲಿ ಚಿನ್ನವಾಗಿರುವುದು ಸ್ಪಷ್ಟಗೊಂಡಿತ್ತು. ಅದರಂತೆ ಪ್ರಸ್ತುತ ಸೊಸೈಟಿಯ ಕಾರ್ಯದರ್ಶಿ ಉಷಾ ಕುಮಾರಿ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಸಾಜುದ್ದೀನ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು. ಆ ವೇಳೆ ಆತ ಕೇರಳ ಹಾಗೂ ಕರ್ನಾಟಕದ ವಿವಿಧೆಡೆಗಳಲ್ಲಾಗಿ ತಲೆಮರೆಸಿಕೊಂಡು ಜೀವಿಸುತ್ತಿದ್ದನು. ನಂತರ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟು ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದನು. ಅದನ್ನು ತಿಳಿದ ಪೊಲೀಸರು ಆರೋಪಿಯನ್ನು ನಂತರ ನಕಲಿ ಚಿನ್ನ ಅಡವಿರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಸುಳ್ಯ ಮತ್ತು ಪುತ್ತೂರು ಠಾಣೆಗಳಲ್ಲಾಗಿ ಒಟ್ಟು ೯ ಕಳವು ಪ್ರಕರಣಗಳಿವೆ. ಮಾತ್ರವಲ್ಲ ಕೇರಳದಲ್ಲೂ ಆತನ ವಿರುದ್ದ ಹಲ್ಲೆ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗತ್ಯದ ವೇಳೆಯಲ್ಲಿ ಮಾತ್ರವೇ ಮೊಬೈಲ್ ಫೋನ್ ಉಪಯೋಗಿಸಿ ನಂತರ ಸ್ವಿಚ್ ಆಫ್ ಮಾಡುವುದು ಈತನ ರೀತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ತಂಡದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸಜೀವನ್ ಕಳತ್ತಿಲ್ ಮತ್ತು ಸಿಪಿಒ ಹಾರಿಫ್ ಒಳಗೊಂಡಿದ್ದರು.






