ಮಂಜೇಶ್ವರ: ರಾತ್ರಿ ಹೊತ್ತಿನಲ್ಲಿ ಮನೆಗೆ ಅತಿಕ್ರಮಿಸಿ ನುಗ್ಗಿದ ತಂಡ ಯುವತಿ ಹಾಗೂ ಆಕೆಯ ಸ್ನೇಹಿತನ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 27ರ ಹರೆಯದ ಗೃಹಿಣಿಯ ದೂರಿನಂತೆ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳಾದ ಇಬ್ಬರು ಪೊಲೀಸರ ಕಸ್ಟಡಿಯಲ್ಲಿರುವುದಾಗಿ ಸೂಚನೆಯಿದೆ.
ಜೂನ್ 23ರಂದು ರಾತ್ರಿ 10.30ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಯುವತಿಯ ಮನೆಗೆ ಅತಿಕ್ರಮಿಸಿದ ನುಗ್ಗಿದ ಆರೋಪಿಗಳು ಯುವತಿ ಹಾಗೂ ಆಕೆಯ ಸ್ನೇಹಿತನ ವೀಡಿಯೋ ಚಿತ್ರೀಕರಿಸಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದಾಗಿಯೂ, ಪತಿಗೂ ಕಳುಹಿಸಿಕೊಡಲಾಗುವುದೆಂದು ಬೆದರಿಕೆಯೊಡ್ಡಿ ಯುವತಿಯೊಂದಿಗೆ ಆರೋಪಿಗಳು ಹಣ ಕೇಳಿದ್ದಾರೆ. ಹಣವಿಲ್ಲವೆಂದು ತಿಳಿಸಿದಾಗ ಬೆದರಿಕೆಯೊಡ್ಡಿ ಯುವತಿಯ ವಜ್ರದ ಬೆಂಡೋಲೆಯನ್ನು ಆರೋಪಿಗಳು ಪಡೆದುಕೊಂಡಿದ್ದಾರೆ. ಅನಂತರದ ದಿನಗಳಲ್ಲೂ ಹಣಕ್ಕಾಗಿ ಬೇಡಿಕೆ ಯೊಡ್ಡಿ ಆರೋಪಿಗಳು ಯುವತಿಗೆ ಬೆದರಿಕೆಯೊಡ್ಡತೊಡಗಿದ್ದರು. ಅಲ್ಲದೆ ತಮ್ಮೊಂದಿಗೆ ಲೈಂಗಿಕ ಸಂಪರ್ಕಕ್ಕೆ ಮುಂದಾಗು ವಂತೆಯೂ ಯುವತಿಗೆ ಆರೋಪಿಗಳು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿರುವು ದಾಗಿ ಹೇಳಲಾಗುತ್ತಿದೆ.






